ADVERTISEMENT

ಸದನದಲ್ಲಿ ‘ಅದಾನಿ ಗದ್ದಲ’: ಜಂಟಿ ಸಂಸದೀಯ ಸಮಿತಿ ರಚನೆಗೆ ವಿಪಕ್ಷ ಪಟ್ಟು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 23:30 IST
Last Updated 25 ನವೆಂಬರ್ 2024, 23:30 IST
<div class="paragraphs"><p>ಲೋಕಸಭೆ ಅಧಿವೇಶನ</p></div>

ಲೋಕಸಭೆ ಅಧಿವೇಶನ

   

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಲಂಚ ಪ್ರಕರಣವನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕೆಂದು ‘ಇಂಡಿಯಾ’ ಮೈತ್ರಿಕೂಟದ ಸಂಸದರು ಪಟ್ಟು ಹಿಡಿದ ಕಾರಣ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಯಾವುದೇ ಕಲಾಪ ನಡೆಯಲಿಲ್ಲ.

ಭಾರತದ ಸಂವಿಧಾನವನ್ನು ಅಳವಡಿಸಿಕೊಂಡ 75ನೇ ವರ್ಷದ ಸ್ಮರಣಾರ್ಥ ಮಂಗಳವಾರ ಸಂವಿಧಾನ ದಿನವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಎರಡೂ ಸದನಗಳ ಕಲಾಪ ಬುಧವಾರ ಬೆಳಿಗ್ಗೆ ಪುನರಾರಂಭಗೊಳ್ಳಲಿದೆ.

ADVERTISEMENT

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷಗಳ ಸಂಸದರು ಅದಾನಿ ಲಂಚ ಪ್ರಕರಣದ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಭಾಧ್ಯಕ್ಷರು ಒಪ್ಪಲಿಲ್ಲ. ಆಗ ವಿಪಕ್ಷಗಳ ಸಂಸದರು ಸಭಾಧ್ಯಕ್ಷರ ನಡೆ ಖಂಡಿಸಿ ಪ್ರತಿಭಟನೆ ನಡೆಸಿದಾಗ ಕಲಾಪವನ್ನು ಬುಧವಾರದವರೆಗೆ ಮುಂದೂಡಲಾಯಿತು.

ಈ ಕುರಿತು ‘ಎಕ್ಸ್’ ಮಾಡಿರುವ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ‘ಮೋದಾನಿ ವಿಷಯವು ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ಸೋಮವಾರ ಪ್ರತಿಧ್ವನಿಸಿತು. ಮೋದಾನಿ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಇಂಡಿಯಾ ಪಕ್ಷಗಳು ಒತ್ತಾಯಿಸಿದವು. ಅದಾನಿ ವಿರುದ್ಧದ ಲಂಚ ಮತ್ತು ಮಾಹಿತಿ ಗೋಪ್ಯವಾಗಿಟ್ಟ ದೋಷಾರೋಪಣೆಗಳು ಹಾಗೂ ಭಾರತೀಯ ಮತ್ತು ಅಮೆರಿಕ ನಿಯಂತ್ರಕರಿಂದ ಮಾಹಿತಿಯನ್ನು ಮುಚ್ಚಿಟ್ಟ ತನಿಖೆಗೆ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಲಾಯಿತು’ ಎಂದಿದ್ದಾರೆ.

ಇಂಡಿಯಾ ಮೈತ್ರಿಕೂಟದ ಸಂಸದರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಸಭೆ ಸೇರಿ ಸದನದಲ್ಲಿ ನಡೆಸಬೇಕಾದ ಹೋರಾಟಗಳ ಕುರಿತು ಚರ್ಚಿಸಿದರು. ಸದನದಲ್ಲಿ ಅದಾನಿ ಹಗರಣವನ್ನು ಪ್ರಸ್ತಾಪಿಸಿ ತಕ್ಷಣದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ನಿರ್ಧರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭೆಯ ವಿಪಕ್ಷ ನಾಯಕರೂ ಆಗಿರುವ ಖರ್ಗೆ, ‘ಸರ್ಕಾರ ಕೈಗೊಳ್ಳಬೇಕಾದ ಮೊದಲ ಹೆಜ್ಜೆಯೆಂದರೆ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರಿಗೆ ಮಸಿ ಬಳಿಯಬಹುದಾದ ಅದಾನಿ ಹಗರಣದ ಕುರಿತು ವಿಸ್ತೃತ ಚರ್ಚೆಯನ್ನು ಕೈಗೊಳ್ಳಬೇಕು. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಇದೇ ಬೇಡಿಕೆಯನ್ನು ಮುಂದಿಟ್ಟಿವೆ. ಅದಾನಿ ಹಗರಣದಿಂದಾಗಿ ಈಗ ಚಿಲ್ಲರೆ ಹೂಡಿಕೆದಾರರ ಶ್ರಮದ ಹೂಡಿಕೆಗಳು ಸಂಕಷ್ಟದಲ್ಲಿವೆ’ ಎಂದರು.

ಲೋಕಸಭೆಯ ಕಲಾಪವು ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡಿತು ಮತ್ತು ನಿಧನರಾದ ಇಬ್ಬರು ಹಾಲಿ ಸಂಸದರಿಗೆ ಸಂತಾಪ ಸೂಚಿಸಿದ ನಂತರ 12 ಗಂಟೆಯವರೆಗೆ ಮುಂದೂಡಲ್ಪಟ್ಟಿತು. ಸದನ ಪುನರಾರಂಭಗೊಂಡಾಗ, ವಿಪಕ್ಷ ಸದಸ್ಯರು ದೇಶದ ಪ್ರಮುಖ ಉದ್ಯಮಿಯ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ವಿಧಿಸಲಾಗಿರುವ ಆರೋಪಗಳ ಕುರಿತ ಚರ್ಚೆಗೆ ಪಟ್ಟು ಹಿಡಿದರು. ಉತ್ತರ ಪ್ರದೇಶದ ಸಂಭಾಲ್‌ ಪ್ರಕರಣದ ಕುರಿತು ಪ್ರಸ್ತಾಪಿಸಿದರು.

ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್, ಮಾಣಿಕಂ ಟ್ಯಾಗೋರ್‌ ಮತ್ತಿತರ ಸಂಸದರು ಅದಾನಿ ವಿಚಾರದ ಚರ್ಚೆಗೆ ಒತ್ತಾಯಿಸಿ ನೋಟಿಸ್ ನೀಡಿದರು. ಲೋಕಸಭಾಧ್ಯಕ್ಷರ ಪೀಠದಲ್ಲಿದ್ದ ಬಿಜೆಪಿ ಸಂಸದೆ ಸಂಧ್ಯಾ ರೇ, ‘ಸದನದ ಕಲಾಪಕ್ಕೆ ಅವಕಾಶ ನೀಡಲು ಸದಸ್ಯರು ಉತ್ಸುಕರಾಗಿಲ್ಲವೇ’ ಎಂದು ಪ್ರಶ್ನಿಸಿ ಕಲಾಪವನ್ನು ಮುಂದೂಡಿದರು.

ರಾಜ್ಯಸಭೆಯಲ್ಲಿ ಕೂಡ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳು ಅದಾನಿ ಕುರಿತು ಚರ್ಚೆಗೆ ಬೇಡಿಕೆ ಇಟ್ಟವು. ಮೊದಲಿಗೆ ಸದನವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು. 11.30ಕ್ಕೆ ಕಲಾಪ ಪುನರಾರಂಭಗೊಂಡಾಗ, ಮತ್ತೆ ಅದೇ ವಿಷಯವನ್ನು ಪ್ರಸ್ತಾಪಿಸಿ ವಿಪಕ್ಷ ಸದಸ್ಯರು ಚರ್ಚೆಗೆ ಪಟ್ಟು ಹಿಡಿದರು. ಆಗ ಸಭಾಪತಿ ಜಗದೀಪ ಧನಕರ್ ಅವರು ಕಲಾಪವನ್ನು ಮುಂದೂಡಿದರು.

ಈ ವೇಳೆ ಧನಕರ್‌, ‘ಕಲಾಪದ ಇತರ ಚಟುವಟಿಕೆಗಳನ್ನು ರದ್ದುಗೊಳಿಸಿ ಅದಾನಿ ಹಗರಣ ಚರ್ಚೆ ನಡೆಸಬೇಕೆಂದು ನಿಯಮ 267ರ ಅಡಿಯಲ್ಲಿ ಸಲ್ಲಿಕೆಯಾಗಿದ್ದ 13 ನೋಟಿಸ್‌ಗಳಿಗೆ ಅನುಮತಿ ನಿರಾಕರಿಸಲಾಗಿದೆ’ ಎಂದರು. ಆರಂಭದಲ್ಲಿ ಖರ್ಗೆ ಅವರಿಗೆ ಮಾತನಾಡಲು ಧನಕರ್‌ ಅವಕಾಶ ನೀಡಿದರು. ಆದರೆ, ‘ಅದಾನಿ ವಿಷಯವನ್ನು ಎತ್ತಿದ್ದರಿಂದ ಅವರ ಮಾತುಗಳು ಕಡತಗಳಿಗೆ ಹೋಗುವುದಿಲ್ಲ’ ಎಂದು ಧನಕರ್‌ ಸ್ಪಷ್ಟಪಡಿಸಿದರು.

ಅದಾನಿ ಪ್ರಕರಣದ ಚರ್ಚೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಸಹೋದ್ಯೋಗಿಗಳಾದ ನೀರಜ್ ಡಾಂಗಿ, ಪ್ರಮೋದ್ ತಿವಾರಿ, ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಸಯ್ಯದ್‌ ನಾಸೀರ್ ಹುಸೇನ್, ಸಿಪಿಐ(ಎಂ)ನ ಜಾನ್ ಬ್ರಿಟ್ಟಾಸ್‌ ಮತ್ತು ಎಎಪಿಯ ಸಂಜಯ್ ಸಿಂಗ್ ನೋಟಿಸ್ ನೀಡಿದರು.

ಮಣಿಪುರ ಹಿಂಸಾಚಾರದ ಕುರಿತು ಸಿಪಿಐನ ಪಿ. ಸಂತೋಷ್ ಕುಮಾರ್ ಮತ್ತು ಎಎಪಿಯ ರಾಘವ್ ಚಡ್ಡಾ ನೋಟಿಸ್‌ ಸಲ್ಲಿಸಿದ್ದರೆ, ಸಂಭಾಲ್ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್, ಕಾಂಗ್ರೆಸ್‌ನ ಹುಸೇನ್ ಮತ್ತು ಮುಸ್ಲಿಂ ಲೀಗ್‌ನ ಹ್ಯಾರಿಸ್ ಬೀರನ್ ಅವರು ನೋಟಿಸ್ ಸಲ್ಲಿಸಿದರು. ಕೇರಳದ ಪ್ರವಾಹ ಪೀಡಿತ ವಯನಾಡ್ ಜಿಲ್ಲೆಗೆ ವಿಶೇಷ ನೆರವು ನೀಡುವ ವಿಷಯದ ಕುರಿತು ಸಿಪಿಐ(ಎಂ) ಸದಸ್ಯ ಪಿ. ಶಿವದಾಸನ್ ಅವರು ತಕ್ಷಣ ಚರ್ಚೆಗೆ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.