ನವದೆಹಲಿ: ಗುರುವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಅಧಿವೇಶನದಲ್ಲಿ ಸಂಘಟಿತ ಹೋರಾಟಕ್ಕಿಳಿಯುವ ಬಗ್ಗೆ ಕಾರ್ಯತಂತ್ರ ರೂಪಿಸುವ ಸಂಬಂಧ ‘ಇಂಡಿಯಾ’ ಸಭೆಯು ಬೆಳಿಗ್ಗೆ 10ಗಂಟೆ ನಿಗದಿಯಾಗಿದೆ.
ಅಧಿವೇಶನ ಶುರುವಾಗುವ ಒಂದು ಗಂಟೆಗೂ ಮೊದಲು ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ನಿಗದಿಯಾಗಿರುವ ಈ ಸಭೆಯಲ್ಲಿ ಪ್ರತಿಪಕ್ಷಗಳ ಸಂಸದೀಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಮೂಲಗಳು ತಿಳಿಸಿವೆ.
ಬೆಂಗಳೂರಿನ ಸಭೆ ಬಳಿಕ ನಡೆಯುತ್ತಿರುವ ‘ಇಂಡಿಯಾ’ದ ಮೊದಲ ಅಧಿಕೃತ ಸಭೆ ಇದಾಗಿದೆ. ಕಾಂಗ್ರೆಸ್ ಇಂತಹ ಸಭೆಗಳ ಉಸ್ತುವಾರಿ ಹೊರುವುದಕ್ಕೆ ಈ ಮೊದಲು ತೃಣಮೂಲ ಕಾಂಗ್ರೆಸ್ ಆಕ್ಷೇಪಿಸಿದ್ದ ಬಗ್ಗೆ ಊಹಾಪೋಹ ಹರಿದಾಡಿತ್ತು.
‘ಆದರೆ, ಬೆಂಗಳೂರಿನ ಸಭೆಯಲ್ಲಿ ಮೂಡಿದ ಸೌಹಾರ್ದವನ್ನು ಮುಂದುವರಿಸಿಕೊಂಡು ಹೋಗಲು ಪ್ರತಿಪಕ್ಷಗಳ ನಾಯಕರು ವಾಗ್ದಾನ ಮಾಡಿದ್ದಾರೆ. ಹಾಗಾಗಿ, ಅಧಿವೇಶನದಲ್ಲಿ ಮೋದಿ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ನಡೆಸಲಿವೆ’ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ವಿರೋಧ ಪಕ್ಷಗಳು ಸಾಮೂಹಿಕ ಹೋರಾಟದ ಸಂಕಲ್ಪ ತೊಟ್ಟಿವೆ. ಆಗಸ್ಟ್ 11ರ ವರೆಗೆ ನಡೆಯಲಿರುವ ಅಧಿವೇಶನದಲ್ಲಿ ಇದು ಮಾರ್ದನಿಸಲಿದೆ ಎಂದು ವಿವರಿಸಿದ್ದಾರೆ.
ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಣ ಹಿಂಸಾಚಾರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದೇ ಅಧಿವೇಶನದಲ್ಲಿ ಪ್ರತಿಪಕ್ಷಗಳ ಹೋರಾಟದ ಪ್ರಧಾನ ವಿಷಯವಾಗಲಿದೆ. ದೆಹಲಿಯ ಸೇವಾ ಆಡಳಿತಾತ್ಮಕ ವಿಷಯಗಳ ನಿಯಂತ್ರಣ ಸಂಬಂಧ ಕೇಂದ್ರವು ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ಮತ ಚಲಾಯಿಸಿ ಒಗ್ಗಟ್ಟು ಪ್ರದರ್ಶಿಸುವ ನಿರೀಕ್ಷೆಯಿದೆ.
ಕಣಿವೆ ರಾಜ್ಯದಲ್ಲಿ ಶಾಂತಿ ಮರೀಚಿಕೆಯಾಗಿದ್ದರೂ ಮೋದಿ ಮೌನ ತಾಳಿದ್ದಾರೆ. ಮಣಿಪುರದಲ್ಲಿ ಶಾಂತಿ ಪುನರ್ ಸ್ಥಾಪಿಸಬೇಕು ಎಂಬ ಬಗ್ಗೆ ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.
ವಿಪಕ್ಷಗಳ ನಿಯಂತ್ರಣಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರದ ನಡುವಿನ ರಾಜಕೀಯ ಸಂಘರ್ಷ, ಬೆಲೆ ಏರಿಕೆ, ನಿರುದ್ಯೋಗ, ದ್ವೇಷ ಭಾಷಣ, ದಲಿತರು, ಆದಿವಾಸಿಗಳು, ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ಗಣತಿ ವಿಷಯದಲ್ಲಿ ಸರ್ಕಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಬಿಜೆಪಿ ಆರೋಪದಲ್ಲಿ ಹುರುಳಿಲ್ಲ: ನಿತೀಶ್
ರಾಜಗೀರ್: ವಿರೋಧ ಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ ಬಗ್ಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುನಿಸಿಕೊಂಡಿದ್ದಾರೆ ಎಂಬ ಬಿಜೆಪಿಯ ಆರೋಪವನ್ನು, ಸ್ವತಃ ನಿತೀಶ್ ಅವರೇ ಸಾರಸಗಟಾಗಿ ತಳ್ಳಿಹಾಕಿದ್ದಾರೆ.
‘ಬೆಂಗಳೂರಿನ ಸಭೆಯಲ್ಲಿ ತಮಗೆ ‘ಸಂಚಾಲಕ’ನ ಜವಾಬ್ದಾರಿ ನೀಡಿಲ್ಲವೆಂದು ಬೇಸರಗೊಂಡಿದ್ದ ಅವರು ಸುದ್ದಿಗೋಷ್ಠಿಯಿಂದ ದೂರ ಉಳಿದಿದ್ದರು’ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಬುಧವಾರ ಇದಕ್ಕೆ ಪ್ರತಿಕ್ರಿಯಿಸಿರುವ ನಿತೀಶ್, ‘ಸುಶೀಲ್ ಕುಮಾರ್ ಮೋದಿ ಅವರ ಮಾತುಗಳನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರ ಆರೋಪದಲ್ಲಿ ಹುರುಳಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೂಳೀಪಟವಾಗುವುದು ನಿಶ್ಚಿತ’ ಎಂದರು.
‘ಸಭೆಯು ಫಲಪ್ರದವಾಗಿದೆ. ಇದಕ್ಕೆ ನಾವೆಲ್ಲರೂ ಖುಷಿಗೊಂಡಿದ್ದೇವೆ. ನಾನು ಪಟ್ನಾಕ್ಕೆ ಬೇಗನೇ ಮರಳಿದ್ದರಿಂದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳನ್ನು ಅಣಿಗೊಳಿಸುವುದು ನನ್ನ ಏಕೈಕ ಗುರಿಯಾಗಿತ್ತು. ಈಗ ಅದಕ್ಕೊಂದು ಮೂರ್ತರೂಪ ಸಿಕ್ಕಿದೆ’ ಎಂದು ಹೇಳಿದರು.
‘ಜೀತೇಗ ಭಾರತ್’ ಟ್ಯಾಗ್‌ಲೈನ್‌ಗೆ ಅಸ್ತು
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ‘ಇಂಡಿಯಾ’ಗೆ ‘ಜೀತೇಗ ಭಾರತ್’ ಅಡಿಬರಹವನ್ನು (ಟ್ಯಾಗ್‌ಲೈನ್) ಅಂತಿಮಗೊಳಿಸಲಾಗಿದೆ.
ಹಿಂದಿಯ ಈ ಅಡಿಬರಹವು ‘ಭಾರತ ಗೆಲ್ಲುತ್ತದೆ’ ಎಂಬ ಅರ್ಥವನ್ನು ಧ್ವನಿಸುತ್ತದೆ. ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಘೋಷಣೆಗೆ ಇದು ಸೂಕ್ತವಾಗಿ ಅನ್ವಯಿಸುತ್ತದೆ. ಹಾಗಾಗಿ, ಇದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
‘ಮೈತ್ರಿಕೂಟದಲ್ಲಿ ‘ಭಾರತ್’ ಎಂದು ಹೆಸರಿಡಲು ಹಲವು ನಾಯಕರು ಸಲಹೆ ನೀಡಿದ್ದರು. ಬಳಿಕ ಈ ಪದವನ್ನು ಟ್ಯಾಗ್‌ಲೈನ್‌ಗೆ ಬಳಸಲು ನಿರ್ಧರಿಸಲಾಯಿತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.