ನವದೆಹಲಿ: ಕಳವಾಗಿರುವ ಪ್ರಾಚೀನ ವಸ್ತುಗಳನ್ನು ಮರಳಿ ಪಡೆಯುವುದಕ್ಕಾಗಿಯೇ ವಿವಿಧ ಇಲಾಖೆಗಳನ್ನೊಳಗೊಂಡ ಕಾರ್ಯಪಡೆಯೊಂದನ್ನು ರಚಿಸಬೇಕು ಎಂದು ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಇಂತಹ ಕಾರ್ಯಗಳಲ್ಲಿ ಪರಿಣತರಾಗಿರುವ ಅಧಿಕಾರಿಗಳನ್ನು ಸೇರಿಸಿ ಕಾರ್ಯಪಡೆ ರಚಿಸಬೇಕು ಎಂದು ಸಮಿತಿಯು ಸಂಸತ್‌ನಲ್ಲಿ ಸೋಮವಾರ ಮಂಡಿಸಿರುವ ವರದಿಯಲ್ಲಿ ಹೇಳಿದೆ.
ಭಾರತದ ಪ್ರಾಚೀನ ವಸ್ತುಗಳ ಅಕ್ರಮ ವ್ಯಾಪಾರ ಮತ್ತು ಅವುಗಳನ್ನು ಮರಳಿ ಪಡೆಯುವ ಸವಾಲುಗಳ ಕುರಿತು ಮಂಡಿಸಿರುವ ವರದಿಯಲ್ಲಿ ಕಾರ್ಯಪಡೆಯನ್ನು ರಚಿಸುವ ಅಗತ್ಯತೆ ಬಗ್ಗೆ ವಿವರಿಸಿದೆ.
ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಈ ಕಾರ್ಯಪಡೆಯಲ್ಲಿರಬೇಕು ಎಂದೂ ಹೇಳಿದೆ.
ಇಟಲಿ, ಕೆನಡಾ, ಅಮೆರಿಕ, ಸ್ಕಾಟ್‌ಲೆಂಡ್, ಸ್ಪೇನ್, ಪ್ರಾನ್ಸ್ ಮೊದಲಾದ ದೇಶಗಳಲ್ಲಿ ಇಂತಹ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದೂ ಸಮಿತಿ ಉಲ್ಲೇಖಿಸಿದೆ.
ದೇಶದಲ್ಲಿರುವ ಪುರಾತನ ವಸ್ತುಗಳ ದತ್ತಾಂಶ ಸಂಚಯ (ಡೇಟಾಬೇಸ್) ಸಂಗ್ರಹಿಸಲು ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹ ನೀಡುವ ಯೋಜನೆಯೊಂದನ್ನು ರೂಪಿಸುವ ಪ್ರಸ್ತಾವವನ್ನೂ ಪರಿಶೀಲಿಸುವಂತೆ ಸಮಿತಿಯು ಶಿಫಾರಸು ಮಾಡಿದೆ.
ಸಂಶೋಧನೆಗಳ ಜೊತೆಗೆ ಕಳವಾಗಿರುವ ಪುರಾತನ ವಸ್ತುಗಳನ್ನು ಮರಳಿ ಪಡೆಯುವ ಜವಾಬ್ದಾರಿಯನ್ನೂ ಎಎಸ್‌ಐ ನಿಭಾಯಿಸುತ್ತಿದೆ ಎಂದು ಸಮಿತಿ ಹೇಳಿರುವುದಾಗಿ ರಾಜ್ಯಸಭೆಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.