ADVERTISEMENT

ಮುಟ್ಟಿನ ರಜೆ ಪರಿಗಣಿಸಲು ಕೇಂದ್ರಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 13:52 IST
Last Updated 15 ಮಾರ್ಚ್ 2023, 13:52 IST
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ    

ನವದೆಹಲಿ: ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಅಥವಾ ಸಮರ್ಥನೆ ಇಲ್ಲದೆಯೇ ಮಹಿಳೆಯರಿಗೆ ನಿರ್ದಿಷ್ಟ ಸಂಖ್ಯೆಯ ಮುಟ್ಟಿನ ರಜೆ ಅಥವಾ ಅನಾರೋಗ್ಯ ರಜೆ ಅಥವಾ ಅರ್ಧ ವೇತನದ ರಜೆ ನೀಡುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದೀಯ ಸ್ಥಾಯಿ ಸಮಿತಿಯು ಕೇಳಿದೆ.

ಬಿಜೆಪಿಯ ಹಿರಿಯ ಸಂಸದ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯು, ‘ಮುಟ್ಟಿನ ರಜೆಯ ಕ್ರಮವು ಔಪಚಾರಿಕ ವಲಯದಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯ ದರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಹಾಗೂ ಅಂತರ್ಗತ ಮತ್ತು ವಿಶಾಲ ತಳಹದಿಯಲ್ಲಿ ಲಿಂಗಾಧಾರಿತ ಅಭಿವೃದ್ಧಿಯಲ್ಲಿ ಸಹಾಯ ಮಾಡಲಿದೆ’ ಎಂದೂ ಅಭಿಪ್ರಾಯಪಟ್ಟಿದೆ.

ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಅವರ ವಿಶಿಷ್ಟ ಅಗತ್ಯಗಳನ್ನು ಅರಿತುಕೊಳ್ಳುತ್ತಾ, ಸಂಬಂಧಿಸಿದವರೊಂದಿಗೆ ಸಮಾಲೋಚನೆ ನಡೆಸಲು ಹಾಗೂ ಮುಟ್ಟಿನ ರಜೆಯ ನೀತಿಯನ್ನು ರೂಪಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಮಿತಿಯು ಶಿಫಾರಸು ಮಾಡಿದೆ.

ADVERTISEMENT

ಮಹಿಳಾ ಕಾರ್ಮಿಕರ ಅನುಕೂಲಕ್ಕಾಗಿ ಮುಟ್ಟಿನ ರಜೆಯನ್ನು ಪರಿಚಯಿಸಲು ಸರ್ಕಾರವು ಪರಿಗಣಿಸುತ್ತಿದೆಯೇ ಎಂಬ ಸಮಿತಿಯ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ‘ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ’ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ ಹೇಳಿತ್ತು. ಇದಾದ ಬಳಿಕ ಸಂಸದೀಯ ಸಮಿತಿಯು ಮುಟ್ಟಿನ ರಜೆಯ ಕುರಿತು ಶಿಫಾರಸು ಮಾಡಿದೆ.

‘ಮಾಸಿಕ ಋತುಸ್ರಾವವು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ದುರ್ಬಲಗೊಳಿಸುತ್ತದೆ. ಇದು ಉದ್ಯೋಗದ ಸ್ಥಳದಲ್ಲಿ ಅವರ ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಪ್ರಸ್ತುತ ಈ ಅಗತ್ಯವನ್ನು ಪರಿಹರಿಸಲು ಯಾವುದೇ ರೀತಿಯ ನೀತಿಯು ಜಾರಿಯಲ್ಲಿಲ್ಲ’ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿಯು ಹೇಳಿದೆ.

‘ಸರ್ಕಾರವು, ಮಹಿಳೆಯರನ್ನು ಒಳಗೊಳ್ಳುವ ಮತ್ತು ಸಮಾನವಾದ ಕೆಲಸದ ಸ್ಥಳವನ್ನು ರಚಿಸಬೇಕು’ ಎಂದೂ ಸಮಿತಿಯು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.