ಪಣಜಿ: ಮೂರು ದಶಕಗಳಲ್ಲಿ ಇದೇ ಮೊದಲಿಗೆ ಹಿರಿಯ ನಾಯಕ ಮನೋಹರ್ ಪರ‍್ರೀಕರ್ ಇಲ್ಲದೆ ಗೋವಾ ಬಿಜೆಪಿ ಚುನಾವಣೆಗೆ ಹೋಗುತ್ತಿದೆ. ಇದೇ 23ರಂದು ಇಲ್ಲಿನ ಎರಡು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಪರ‍್ರೀಕರ್ ಅನುಪಸ್ಥಿತಿಯೇ ಬಿಜೆಪಿಗೆ ಬಹುದೊಡ್ಡ ಹಿನ್ನಡೆ.
ನೇಪಥ್ಯದ ಕೆಲಸಗಳಲ್ಲಿ ಚತುರನಾಗಿದ್ದ ಪರ್‍ರೀಕರ್, ಮುನ್ನೆಲೆಯ ವಾಗ್ದಾಳಿಯಲ್ಲಿಯೂ ಪ್ರಚಂಡರಾಗಿದ್ದರು. ಚುನಾವಣಾ ಪ್ರಚಾರವನ್ನು ತಮ್ಮ ಹೆಗಲಿಗೇರಿಸಿಕೊಂಡು, ಪಕ್ಷವನ್ನು ಮುನ್ನಡೆಸಬಲ್ಲವರಾಗಿದ್ದರು. ಹಾಗಾಗಿ, ಈ ಬಾರಿ ಬಿಜೆಪಿಯ ಪ್ರಚಾರದ ಮೇಲೆ ಪರ‍್ರೀಕರ್ ಇಲ್ಲದಿರುವುದು ದೊಡ್ಡ ಪರಿಣಾಮ ಬೀರಿದೆ.
ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರು ಉತ್ತರ ಗೋವಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ. ಸತತ ಐದನೇ ಗೆಲುವನ್ನು ಅವರು ಎದುರು ನೋಡುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರು ಈ ಬಾರಿ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವ ಅಗತ್ಯ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ಸಾಧನೆಗಳು ಮಾತ್ರ ಪಕ್ಷವನ್ನು ದಡ ಸೇರಿಸದು ಎಂಬ ಭಾವನೆ ಇದೆ. ರಾಷ್ಟ್ರೀಯ ವಿಚಾರಗಳಿಗಿಂತ ಸ್ಥಳೀಯ ವಿಚಾರಗಳೇ ಮುನ್ನೆಲೆಗೆ ಬಂದಿರುವುದು ಬಿಜೆಪಿಯಲ್ಲಿ ಈ ಭಾವನೆ ಬರಲು ಕಾರಣವಾಗಿದೆ.
ಕೇಂದ್ರ ಮತ್ತು ಗೋವಾದಲ್ಲಿನ ಸಮ್ಮಿಶ್ರ ಸರ್ಕಾರದ ಕೆಲವು ವೈಫಲ್ಯಗಳು ಬಿಜೆಪಿಯನ್ನು ಕಾಡುತ್ತಿವೆ. ಗಣಿಗಾರಿಕೆ ಪುನರಾರಂಭದ ವಿಚಾರ ನಾಯಕ್ ಮತ್ತು ದಕ್ಷಿಣ ಗೋವಾದ ಬಿಜೆಪಿ ಅಭ್ಯರ್ಥಿ ನರೇಂದ್ರ ಸವಾಯ್‌ಕರ್ ಅವರಿಗೆ ಬಿಸಿ ಮುಟ್ಟಿಸಿದೆ. ಗಣಿಗಾರಿಕೆಯ ಪ್ರದೇಶ 10 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಇಲ್ಲಿನ ನಿರುದ್ಯೋಗಿ ಜನರು ಆಕ್ರೋಶಗೊಂಡಿದ್ದಾರೆ. ಹಿಂದೆಲ್ಲ ಈ ಆಕ್ರೋಶ ತಣಿಸಲು ಪರ‍್ರೀಕರ್ ಇದ್ದರು.
ಗಣನೀಯವಾಗಿರುವ ಕ್ರೈಸ್ತ ಸಮುದಾಯದ ಮತಗಳು ದಕ್ಷಿಣ ಗೋವಾದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಅಲ್ಪಸಂಖ್ಯಾತರ ಮೇಲಿನ ಹಲ್ಲೆ, ದನದ ಮಾಂಸ ತಿನ್ನುವುದರ ವಿರುದ್ಧ ದೌರ್ಜನ್ಯ ದೇಶವ್ಯಾಪಿ ಇರುವ ವಿಚಾರಗಳು. ಇದು ಕ್ರೈಸ್ತ ಸಮುದಾಯದ ಮತಗಳ ಮೇಲೆ ಪ್ರಭಾವ ಬೀರುವುದರಲ್ಲಿ ಅನುಮಾನ ಇಲ್ಲ. ಮಾಜಿ ಮುಖ್ಯಮಂತ್ರಿ ಫ್ರಾನ್ಸಿಸ್ಕೊ ಸಾರ್ಡಿನ್ಹಾ ಅವರು ದಕ್ಷಿಣ ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ.
ಬಿಜೆಪಿಯ ಮುಂದೆ ಹಲವು ಸವಾಲುಗಳಿವೆ. ಹಾಗೆಯೇ ಕಾಂಗ್ರೆಸ್ ಮುಂದಿನ ದಾರಿ ಸುಲಲಿತವೇನೂ ಅಲ್ಲ. ಗೆಲ್ಲಬೇಕಿದ್ದರೆ ಕಾಂಗ್ರೆಸ್ ಹಲವು ಕೆಲಸಗಳನ್ನು ಮಾಡಬೇಕಾಗಿದೆ.
ನಾಲ್ವರು ಮಾಜಿ ಮುಖ್ಯಮಂತ್ರಿಗಳು ಶಾಸಕರಾಗಿರುವುದೇ ಕಾಂಗ್ರೆಸ್‌ನ ದೊಡ್ಡ ಸಮಸ್ಯೆ. ಈ ನಾಲ್ವರೂ ಪರಸ್ಪರರ ವಿರುದ್ಧ ಸದಾ ಕತ್ತಿ ಮಸೆಯುತ್ತಿರುತ್ತಾರೆ. ಏಳು ವರ್ಷಗಳಿಂದ ಕಾಂಗ್ರೆಸ್ ವಿರೋಧ ಪಕ್ಷವಾಗಿಯೇ ಉಳಿಯಲು ಇದೂ ಒಂದು ಮುಖ್ಯ ಕಾರಣ.
2017ರ ವಿಧಾನಸಭೆ ಚುನಾವಣೆ ನಂತರ ಗಿರೀಶ್ ಚೋಡನ್ಕರ್ ಅವರನ್ನು ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಲ್ಲಿವರೆಗೆ, ಪರ‍್ರೀಕರ್ ನೇತೃತ್ವದ ಸರ್ಕಾರವನ್ನು ಟೀಕಿಸುವುದಕ್ಕೂ ಕಾಂಗ್ರೆಸ್ ನಾಯಕರು ಸಿದ್ಧರಿರಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಹಲ್ಲಿಲ್ಲದ ಹಾವು ಎಂದೇ ಹೇಳಲಾಗುತ್ತಿತ್ತು.
ಕಾಂಗ್ರೆಸ್‌ನ ಇಬ್ಬರು ಶಾಸಕರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಇನ್ನಷ್ಟು ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂಬ ಸುದ್ದಿಗಳು ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ವರ್ಚಸ್ಸಿಗೆ ಭಾರಿ ಹೊಡೆತ ಕೊಟ್ಟಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಪಡೆಯುವ ಮತಗಳ ಬಗ್ಗೆಯೂ ಕಾಂಗ್ರೆಸ್ ಎಚ್ಚರಿಕೆಯಿಂದ ಇರಬೇಕಿದೆ. ಎರಡೂ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸುತ್ತಿದೆ. ಈ ಪಕ್ಷಕ್ಕೆ ಗೋವಾದ ಕ್ಯಾಥಲಿಕ್ ಸಮುದಾಯದಲ್ಲಿ ಮಾತ್ರ ಸಲ್ಪಸ್ವಲ್ಪ ಪ್ರಭಾವ ಇದೆ. ಗೋವಾದಲ್ಲಿ ಈ ಸಮುದಾಯದ ಮತಪ್ರಮಾಣ ಶೇ 26ರಷ್ಟು.
ಬಿಜೆಪಿಯ ಸ್ವಯಂಕೃತಾಪರಾಧ
ಹಲವು ಸಂಕಷ್ಟಗಳ ನಡುವೆ ಬಿಜೆಪಿಯೇ ಮೇಲೆಳೆದುಕೊಂಡ ಒಂದು ವಿಚಾರವೂ ಇದೆ. ಏಳು ವರ್ಷಗಳಿಂದ ಜತೆಯಲ್ಲಿದ್ದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ (ಎಂಜಿಪಿ) ಜತೆಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡಿದೆ. ಅಷ್ಟೇ ಅಲ್ಲದೆ, ಆ ಪಕ್ಷವನ್ನು ಒಡೆದು, ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದವರನ್ನು ವಜಾ ಮಾಡಿ ಅವಮಾನವನ್ನೂ ಮಾಡಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಎಂಜಿಪಿ ನಿರ್ಧರಿಸಿದೆ.
ಬಿಜೆಪಿ ಮತ್ತು ಎಂಜಿಪಿ ಜತೆಯಾಗಿ ಚುನಾವಣೆಗೆ ಹೋದಾಗ ಸಂಪ್ರದಾಯವಾದಿ ಹಿಂದೂ ಮತಗಳು ಒಟ್ಟಾಗಿ ಈ ಮೈತ್ರಿಕೂಟಕ್ಕೆ ಬೀಳುತ್ತಿದ್ದವು. ಆದರೆ, ಪ್ರತ್ಯೇಕವಾಗಿ ಸ್ಪರ್ಧಿಸಿದಾಗ ಈ ಎಲ್ಲ ಮತಗಳು ಒಟ್ಟಾಗಿ ಬಿಜೆಪಿಗೆ ಬೀಳುವ ಖಾತರಿ ಇಲ್ಲ.
‘ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ನಮ್ಮ ಇಬ್ಬರು ಶಾಸಕರನ್ನು ಖರೀದಿಸಿದ್ದಲ್ಲದೆ ಗೋವಾದ ಜನರಿಗೂ ಅವಮಾನ ಮಾಡಿದ ಬಿಜೆಪಿಗೆ ಯಾವ ರೀತಿ ಪಾಠ ಕಲಿಸಬೇಕು ಎಂಬುದನ್ನು ಜನ ನಿರ್ಧರಿಸಲಿದ್ದಾರೆ’ ಎಂದು ಎಂಜಿಪಿ ಕಾರ್ಯಾಧ್ಯಕ್ಷ ನಾರಾಯಣ ಸಾವಂತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.