ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಬಹುತೇಕ ಅವಿರೋಧವಾಗಿ ಅಂಗೀಕಾರವಾದ ಘಳಿಗೆಯನ್ನು ‘ಭಾರತದ ಸಂಸದೀಯ ಇತಿಹಾಸದಲ್ಲಿ ಸುವರ್ಣ ಗಳಿಗೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಜೊತೆಗೆ, ಈ ಸಾಧನೆಯ ಹೆಗ್ಗಳಿಕೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತ್ತು ಸಂಸತ್ ಸದಸ್ಯರಿಗೆ ಸೇರಿದ್ದು ಎಂದಿದ್ದಾರೆ.
ಗುರುವಾರದ ಲೋಕಸಭೆ ಕಲಾಪವು ಆರಂಭವಾಗುತ್ತಿದ್ದಂತೆ ಎದ್ದುನಿಂತು ಮಸೂದೆ ಅಂಗೀಕಾರದ ಕುರಿತು ಮಾತನಾಡಿದ ಮೋದಿ ಅವರು, ‘ನಾರಿ ಶಕ್ತಿ ವಂದನೆ ಅಧಿನಿಯಮ’ ಅಂಗೀಕಾರದಂಥ ಪವಿತ್ರ ಕಾರ್ಯ ಸಾಧಿಸಲು ಸಹಕಾರ, ಕೊಡುಗೆ ನೀಡಿದ ಮತ್ತು ಅರ್ಥಪೂರ್ಣ ಚರ್ಚೆ ನಡೆಸಿದ ಎಲ್ಲಾ ಸದಸ್ಯರಿಗೆ ಸದನದ ನಾಯಕನಾಗಿ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ’ ಎಂದರು.
ಲೋಕಸಭೆಯಲ್ಲಿ ಬುಧವಾರ ನಡೆದ ಚರ್ಚೆ ಮತ್ತು ರಾಜ್ಯಸಭೆಯಲ್ಲಿ ಮುಂದೆ ನಡೆಯಲಿರುವ ಚರ್ಚೆಯು ‘ಮಾತೃಶಕ್ತಿ’ ಕುರಿತ ಮನೋಭಾವವನ್ನು ಬದಲಿಸಲಿದೆ. ಅದರಿಂದ ಹೊಮ್ಮುವ ಆತ್ಮವಿಶ್ವಾಸವು ದೇಶ ಹೊಸ ಎತ್ತರಕ್ಕೆ ಏರಲು ಬಲ ತುಂಬಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.