ಅಮೃತಸರ: ದುಬೈನಿಂದ ಆಗಮಿಸಿದ ವ್ಯಕ್ತಿಯಿಂದ 1 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಜಪ್ತಿ ಮಾಡಿದ ಚಿನ್ನವು 1.068 ಕೆ.ಜಿ ತೂಕವಿದ್ದು, ಸುಮಾರು ₹67 ಲಕ್ಷ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಇಲಾಖೆಯ ಕಳ್ಳಸಾಗಣೆ ತಡೆ ಘಟಕದ ಅಧಿಕಾರಿಗಳು ಗುರುವಾರ ಇಲ್ಲಿನ ಶ್ರೀ ಗುರು ರಾಮದಾಸ್ ಜೀ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ತಡೆದು ತಪಾಸಣೆ ನಡೆಸಿದ್ದಾರೆ.
ದುಬೈನಿಂದ ಬಂದಿದ್ದ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಆತನ ಬಳಿ ಪೇಸ್ಟ್ ರೂಪದ ಚಿನ್ನ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕ ಅದನ್ನು ಹಳದಿ ಪ್ಯಾಕೆಟ್‌ನಲ್ಲಿ ಸುತ್ತಿ ತನ್ನ ಸೊಂಟ ಪಟ್ಟಿಯಲ್ಲಿ ಅಡಗಿಸಿಟ್ಟುಕೊಂಡಿದ್ದ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಕಳ್ಳಸಾಗಣೆಯ ಕೆಲಸಕ್ಕೆ ದುಬೈನಲ್ಲಿ ನನಗೆ ₹10,000 ನೀಡಿದರು ಎಂದು ಪ್ರಯಾಣಿಕ ಹೇಳಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಸ್ಟಮ್ಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.