ಲಖನೌ/ನವದೆಹಲಿ: ಹಿಂದೂ–ಮುಸ್ಲಿಂ ದಂಪತಿಗೆ ಅವಮಾನ ಮಾಡಿದ ಆರೋಪಕ್ಕಾಗಿ ಲಖನೌ ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮುಸ್ಲಿಂ ಪತಿಗೆ ಒತ್ತಾಯಿಸಿದ್ದಕ್ಕೆ ಮತ್ತು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವುದಕ್ಕೆ ಅವರ ಪತ್ನಿಯನ್ನು ನಿಂದಿಸಿದ ಆರೋಪಕ್ಕಾಗಿ ಈ ಕ್ರಮಕೈಗೊಳ್ಳಲಾಗಿದೆ.
ಮೊಹಮ್ಮದ್ ಅನಾಸ್ ಸಿದ್ದಿಕಿ ಮತ್ತು ತನ್ವಿ ಸೇಥ್ ದಂಪತಿ ಬುಧವಾರ ಪಾಸ್‌ಪೋರ್ಟ್ ಕಚೇರಿಗೆ ತೆರಳಿದ್ದಾಗ ತಮಗಾದ ಕಿರುಕುಳ ಹಾಗೂ ಅವಮಾನದ ಬಗ್ಗೆ ಟ್ವೀಟ್ ಮಾಡಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ಯಾಗ್ ಮಾಡಿದ್ದರು.
ಹೀಗಾಗಿ, ಗುರುವಾರ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿ ವಿಕಾಸ್ ಮಿಶ್ರಾ ಅವರನ್ನು ಗೋರಖಪುರಗೆ ವರ್ಗಾವಣೆ ಮಾಡಲಾಗಿದೆ. ಜತೆಗೆ ವಿವರಣೆ ಕೇಳಿ ಷೋಕಾಸ್ ನೋಟಿಸ್ ನೀಡಲಾಗಿದೆ.
12 ವರ್ಷಗಳ ಹಿಂದೆ ಸಿದ್ದಿಕಿ ಮತ್ತು ತನ್ವಿ ಸೇಥ್ ವಿವಾಹವಾಗಿದ್ದಾರೆ. ಬುಧವಾರ ಹೊಸ ಪಾಸ್‌ಪೋರ್ಟ್ ಪಡೆಯುವ ಸಂಬಂಧ ಇಲ್ಲಿನ ಕಚೇರಿಗೆ ತೆರಳಿದ್ದಾಗ ಮಿಶ್ರಾ ಅವರು ಅವಮಾನ ಮಾಡಿ ಪಾಸ್‌ಪೋರ್ಟ್ ಅರ್ಜಿಯನ್ನು ತಡೆಹಿಡಿದಿದ್ದರು ಎಂದು ದೂರಲಾಗಿತ್ತು.
‘ದಂಪತಿಗೆ ಪಾಸ್‌ಪೋರ್ಟ್ ನೀಡಲಾಗಿದೆ. ವಿದೇಶಾಂಗ ಸಚಿವಾಲಯಕ್ಕೆ ಈ ಘಟನೆ ಕುರಿತು ವರದಿ ಕಳುಹಿಸಲಾಗಿದೆ. ಈ ಅಹಿತಕರ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮತ್ತೆ ಈ ರೀತಿ ಮರುಕಳಿಸದಂತೆ ಎಚ್ಚರವಹಿಸುತ್ತೇವೆ’ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಪೀಯೂಷ್ ವರ್ಮಾ ತಿಳಿಸಿದ್ದಾರೆ.
ಸಕಾಲಕ್ಕೆ ಕ್ರಮಕೈಗೊಂಡಿದ್ದಕ್ಕೆ ತನ್ವಿ ಸೇಥ್ ಅವರು ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
‘ಗುರುವಾರ ಬೆಳಿಗ್ಗೆ ಪಾಸ್‌ಪೋರ್ಟ್ ಕಚೇರಿಗೆ ತೆರಳಿದಾಗ ಪೀಯೂಷ್ ವರ್ಮಾ ಮತ್ತು ಇತರ ಅಧಿಕಾರಿಗಳು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬುಧವಾರ ನಡೆದ ಘಟನೆಯ ಬಗ್ಗೆ ಕ್ಷಮೆಯಾಚಿಸಿದರು. ದಾಖಲೆಗಳನ್ನು ಪರಿಶೀಲಿಸಿ ತಕ್ಷಣವೇ ಪಾಸ್‌ಪೋರ್ಟ್ ನೀಡಿದರು’ ಎಂದು ತನ್ವಿ ಸೇಥ್ ಟ್ವೀಟ್ ಮಾಡಿದ್ದಾರೆ.
’ಪತ್ನಿಗೆ ಹೊಸ ಪಾಸ್‌ಪೋರ್ಟ್ ಮತ್ತು ನನ್ನ ಪಾಸ್‌ಪೋರ್ಟ್ ನವೀಕರಣ ಮಾಡಿಸಿಕೊಳ್ಳಲು ತೆರಳಿದ್ದಾಗ ಈ ಅಹಿತಕರ ಘಟನೆ ನಡೆಯಿತು. ನನ್ನ ಧರ್ಮ ಮತ್ತು ಹೆಸರು ಬದಲಾಯಿಸಿಕೊಂಡರೆ ಮಾತ್ರ ಪಾಸ್‌ಪೋರ್ಟ್ ನೀಡುವುದಾಗಿ ಅಧಿಕಾರಿ ತಿಳಿಸಿದರು’ ಎಂದು ಸಿದ್ದಿಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಿದ್ದಿಕಿ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಪಾಸ್‌ಪೋರ್ಟ್ ಅಧಿಕಾರಿ ವಿಕಾಸ್ ಮಿಶ್ರಾ, ‘ನಾನು ಜಾತ್ಯತೀತ. ನಾನು ಅಂತರ್ಜಾತಿ ವಿವಾಹವಾಗಿದ್ದೇನೆ. ತನ್ವಿ ಸೇಥ್ ಅವರ ಮದುವೆಯ ಸಂದರ್ಭದಲ್ಲಿನ ಹೆಸರು ಶಾಝಿಯಾ ಅನಾಸ್ ಎಂದು ತೋರಿಸಲಾಗಿದೆ. ಕಡತಗಳಲ್ಲಿ ಇದೇ ಹೆಸರನ್ನು ನಮೂದಿಸಿ ಎಂದು ಸೂಚಿಸಿದೆ. ಆದರೆ, ಅವರು ನಿರಾಕರಿಸಿದರು. ಆ ಹೆಸರನ್ನೇ ನಮೂದಿಸಿದ್ದರೆ ಕಡತಗಳಲ್ಲಿ ಬದಲಾವಣೆ ಮಾಡಲು ಕಳುಹಿಸಲಾಗುತ್ತಿತ್ತು. ಪಾಸ್‌ಪೋರ್ಟ್ ಅನ್ನು ಯಾರು, ಯಾವ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ ಎನ್ನುವುದು ಸಹ ಮುಖ್ಯವಾಗುತ್ತದೆ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.