ನವದೆಹಲಿ: ‘ದಾರಿ ತಪ್ಪಿಸುವಂತಹ’ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕೆ ಸಂಬಂಧಿಸಿ, ಯೋಗ ಗುರು ರಾಮದೇವ ಹಾಗೂ ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಬೇಷರತ್ತಾಗಿ ಕ್ಷಮೆ ಕೋರಿ ಸಲ್ಲಿಸಿದ ಪ್ರಮಾಣಪತ್ರಗಳನ್ನು ಒಪ್ಪಿಕೊಳ್ಳಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿತು.
ಇಬ್ಬರನ್ನೂ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ‘ನೀವು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಿದ್ದೀರಿ. ಬೇರೆ ದಾರಿ ಕಾಣದೇ ಈಗ ಕ್ಷಮೆ ಕೇಳುತ್ತಿದ್ದೀರಿ. ಆದರೆ, ಈ ವಿಚಾರವಾಗಿ ನ್ಯಾಯಾಲಯ ಬಹಳ ಉದಾರಿಯಾಗಲು ಇಚ್ಛಿಸುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಹೇಳಿತು.
‘ಜನರ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಸಂಬಂಧಿಸಿ ನ್ಯಾಯಾಲಯಕ್ಕೆ ನೀಡಿದ್ದ ಮುಚ್ಚಳಿಕೆಯನ್ನು ಉದ್ದೇಶಪೂರ್ವಕವಾಗಿ ಪಾಲನೆ ಮಾಡದ ಹಾಗೂ ಮೊಂಡುತನ ಧೋರಣೆಯಿಂದಾಗಿ ಈ ಕ್ಷಮಾಪಣೆಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಕುರಿತು ಸಮಾಜಕ್ಕೆ ಸ್ಪಷ್ಟ ಸಂದೇಶವೊಂದು ರವಾನೆಯಾಗಬೇಕಿದೆ’ ಎಂದೂ ನ್ಯಾಯಪೀಠ ಹೇಳಿತು.
‘ಹಲವು ಕಾಯಿಲೆಗಳನ್ನು ಗುಣಪಡಿಸಲಾಗುವುದು ಎಂದು ಹೇಳಿಕೊಂಡು ಜನರನ್ನು ವಂಚಿಸುವ ಎಲ್ಲ ಎಫ್‌ಎಂಸಿಜಿಗಳ (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು) ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸುತ್ತದೆ’ ಎಂದು ಹೇಳಿತು.
ಪತಂಜಲಿ ಆಯುರ್ವೇದ ಕಂಪನಿಯು ಜನರ ದಾರಿ ತಪ್ಪಿಸುವಂತಹ ಜಾಹೀರಾತುಗಳನ್ನು ನೀಡುತ್ತಿದೆ ಎಂದು ದೂರಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಮಾತು ಹೇಳಿದೆ.
‘ರಾಮದೇವ ಹಾಗೂ ಬಾಲಕೃಷ್ಣ ಅವರಿಗೆ ಶೋ ಕಾಸ್ ನೋಟಿಸ್ ನೀಡಿದ್ದಲ್ಲದೇ, ನ್ಯಾಯಪೀಠದ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿತ್ತು. ಕೋರ್ಟ್ ಮುಂದೆ ಸ್ವತಃ ಹಾಜರಾಗದೇ ನುಣುಚಿಕೊಳ್ಳಲು ಪ್ರಯತ್ನಿಸಿದರು. ಇಂತಹ ನಡೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಪೀಠ ಹೇಳಿತು.
‘ರಾಮದೇವ ಮತ್ತು ಬಾಲಕೃಷ್ಣ ಅವರ ನಡೆಯನ್ನು, ಕೋರ್ಟ್‌ನ ಆದೇಶ ಮತ್ತು ಮುಚ್ಚಳಿಕೆ ಪತ್ರದ ಉದ್ದೇಶಪೂರ್ವಕ ಉಲ್ಲಂಘನೆ ಎಂದು ಭಾವಿಸುತ್ತೇವೆ’ ಎಂದು ಇಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ಹೇಳಿದರು.
‘ನನ್ನ ಕಕ್ಷಿದಾರರು ಬೇಷರತ್ತಾಗಿ ಕ್ಷಮೆ ಯಾಚಿಸಿದ್ದಾರೆ’ ಎಂಬ ಅಂಶವನ್ನು ರೋಹ್ಟಗಿ ಅವರು ಪೀಠದ ಗಮನಕ್ಕೆ ತಂದರು.
‘ಈ ಪ್ರಕರಣದ ಇತಿಹಾಸ ಹಾಗೂ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿರುವ ಈ ಇಬ್ಬರ ನಡವಳಿಕೆಯನ್ನು ಗಮನಿಸಿದ ಮೇಲೆ, ಅವರು ಸಲ್ಲಿಸಿರುವ ಪ್ರಮಾಣಪತ್ರವನ್ನು ಸ್ವೀಕರಿಸಲು ಆಗದು’ ಎಂದು ನ್ಯಾಯಪೀಠ ಹೇಳಿತು.
ಆಗ, ರೋಹ್ಟಗಿ, ‘ಜನರು ತಪ್ಪುಗಳನ್ನು ಮಾಡುವುದು ಸಹಜ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಹಾಗಾದರೆ, ಅವರು ಪರಿಣಾಮವನ್ನು ಎದುರಿಸಲಿ‘ ಎಂದಿತು.
‘ಕೋರ್ಟ್‌ಗೆ ನೀಡಿದ್ದ ಮುಚ್ಚಳಿಕೆ ಪತ್ರಕ್ಕೆ ನೀವು ತೋರಿದಂತಹ ಅಸಡ್ಡೆಯನ್ನೇ ನಿಮ್ಮ ಕ್ಷಮಾಪಣೆ ಪತ್ರಕ್ಕೆ ನಾವು ತೋರಿಸಬಾರದೇಕೆ’ ಎಂದು ಪ್ರಶ್ನಿಸಿದ ನ್ಯಾಯಪೀಠ, ‘ಈ ಇಬ್ಬರು ಸಲ್ಲಿಸಿದ ಪ್ರಮಾಣಪತ್ರಗಳ ಬಗ್ಗೆ ನಮಗೆ ವಿಶ್ವಾಸ ಇಲ್ಲ’ ಎಂದು ಹೇಳಿ, ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿತು.
ಉತ್ತರಾಖಂಡದ ಔಷಧ ಪರವಾನಗಿ ಪ್ರಾಧಿಕಾರಕ್ಕೂ ಚಾಟಿ
ಪತಂಜಲಿ ಆಯುರ್ವೇದದ ಜಾಹೀರಾತುಗಳ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಉತ್ತರಾಖಂಡದ ಔಷಧ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರವನ್ನು ಕೂಡ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ ‘ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಕಟು ಮಾತುಗಳಲ್ಲಿ ಎಚ್ಚರಿಕೆ ನೀಡಿತು. ‘ಪ್ರಾಧಿಕಾರವು ಕಡತಗಳನ್ನು ಸಾಗಿಸುವುದನ್ನು ಹೊರತುಪಡಿಸಿ ಕಳೆದ 4–5 ವರ್ಷಗಳಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನು ತಿಳಿದು ದಿಗ್ಭ್ರಮೆಯಾಗಿದೆ’ ಎಂದ ಪೀಠ ಪ್ರಾಧಿಕಾರದ ಪರ ಅಧಿಕಾರಿಯೊಬ್ಬರು ಹಾಜರಾಗಿ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣಗಳನ್ನು ವಿವರಿಸಬೇಕು ಎಂದು ಸೂಚಿಸಿತು. ವಿಚಾರಣೆ ವೇಳೆ ಪ್ರಾಧಿಕಾರದ ಜಂಟಿ ನಿರ್ದೇಶಕರನ್ನು ಉದ್ಧೇಶಿಸಿ ‘ನೀವು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಿತ್ತು’ ಎಂದು ಪೀಠ ಹೇಳಿತು. ‘ಈ ಪ್ರಕರಣ ಕುರಿತು ತಾನು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಬಗ್ಗೆ ನಿಮಗಿಂತಲೂ ಮೊದಲು ಇದ್ದ ಅಧಿಕಾರಿಗಳು ಕೂಡ ಪ್ರಮಾಣಪತ್ರ ಸಲ್ಲಿಸಲಿ’ ಎಂದು ಸೂಚಿಸಿತು. 2018ರಿಂದ ಇಲ್ಲಿಯ ವರೆಗೆ ಹರಿದ್ವಾರದಲ್ಲಿ ಕರ್ತವ್ಯ ನಿರ್ವಹಣೆ ಮಾಡಿರುವ ಜಿಲ್ಲಾ ಅಯುರ್ವೇದ ಮತ್ತು ಯುನಾನಿ ಅಧಿಕಾರಿಗಳು ಕೂಡ ಕ್ರಮ ಕೈಗೊಳ್ಳದಿರುವ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದೂ ಪೀಠ ನಿರ್ದೇಶನ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.