ADVERTISEMENT

25 ವರ್ಷದ ಪ್ರಗತಿಗೆ ಮಾರ್ಗಪಥ ಸಿದ್ಧ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 20:45 IST
Last Updated 4 ಆಗಸ್ಟ್ 2022, 20:45 IST
‘ಸಂಕಲ್ಪದಿಂದ ಸಿದ್ಧಿ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಳೆಯಿಂದಾಗಿ ಕೊಡೆ ಹಿಡಿದು ಬಂದ ಪರಿ - ಪ್ರಜಾವಾಣಿ ಚಿತ್ರ/ ರಂಜು ಪಿ.
‘ಸಂಕಲ್ಪದಿಂದ ಸಿದ್ಧಿ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಳೆಯಿಂದಾಗಿ ಕೊಡೆ ಹಿಡಿದು ಬಂದ ಪರಿ - ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ‘ದೇಶದ ಭವಿಷ್ಯದ 25 ವರ್ಷದ ಪ್ರಗತಿಗೆ ಮಾರ್ಗಪಥವನ್ನು ಈಗಲೇ ರೂಪಿಸಲಾಗಿದೆ.ಅದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು‘ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಮೂರನೇ ಆವೃತ್ತಿಯ ‘ಸಂಕಲ್ಪ್ ಸೆ ಸಿದ್ಧಿ’ ಸಮ್ಮೇಳನದಲ್ಲಿ ಅವರು ಮಾತನಾಡಿದರು. ‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 8 ವರ್ಷಗಳಲ್ಲಿ ‘ಸರ್ವ ವ್ಯಾಪಿ, ಸರ್ವ ಸ್ಪರ್ಶಿ’ಯಾಗಿ ಕಾರ್ಯನಿರ್ವಹಿಸಿದೆ’ ಎಂದರು.

‌‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಬಗ್ಗೆ ಅರಿವು ಮೂಡಿಸುವುದು, ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ಎಲ್ಲ ಕ್ಷೇತ್ರಗಳಲ್ಲಿ ಭಾರತ ಪ್ರಥಮ ಸ್ಥಾನಕ್ಕೇರುವ ಸಂಕಲ್ಪ, ಯೋಜನೆ, ಅಭಿವೃದ್ಧಿ, ಉದ್ಯಮ, ವಹಿವಾಟು ಹೀಗೆ ಎಲ್ಲ ಒಳಗೊಂಡು ಅಮೃತ ಸ್ವಾತಂತ್ರ್ಯೋತ್ಸವ ಆಚರಣೆಗೆ ಮಹತ್ವ ಬಂದಿದೆ’ ಎಂದು ಹೇಳಿದರು.

ADVERTISEMENT

‘2014ಕ್ಕೂ ಮೊದಲು ಕೇಂದ್ರ ಸರ್ಕಾರದ ನೀತಿಗಳಿಗೆ ಪಾರ್ಶ್ವವಾಯು ಬಡಿದಂತಿತ್ತು. ಪ್ರಧಾನಿಯವರನ್ನು ಹಿಂದೆ ಯಾರೂ ಪ್ರಧಾನಿಯಂತೆ ಕಾಣುತ್ತಿರಲಿಲ್ಲ. ಪ್ರತಿಯೊಬ್ಬಕೇಂದ್ರ ಸಚಿವರು ಪ್ರಧಾನಿ ಎಂಬಂತೆ ವರ್ತಿಸುತ್ತಿದ್ದರು. ಆರ್ಥಿಕತೆ ಬೆಳಗಣಿಗೆಗೆ ಗೊತ್ತು ಗುರಿ ಇರಲಿಲ್ಲ. 2014ರಲ್ಲಿ ಜನಾದೇಶ ಪಡೆದ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿಗೆ ಒಂದು ನಿರ್ದಿಷ್ಟ ಪಥ ರೂಪಿಸಿದರು’ ಎಂದುತಿಳಿಸಿದರು.

‘ಮುಂಬರುವ ವರ್ಷಗಳಲ್ಲಿ ತಲಾ 100 ವಿಮಾನನಿಲ್ದಾಣ ಮತ್ತು ಹೆಲಿಪೋರ್ಟ್ ನಿರ್ಮಿಸುವ ಚಿಂತನೆಯಿದೆ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಅವರು ಹೇಳಿದರು.

ಆತ್ಮವಿಶ್ವಾಸ ತುಂಬಿದ ಮೋದಿ: ಸಿಎಂಬೊಮ್ಮಾಯಿ

‘ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಗೆ ಅನುಮೋದನೆ ನೀಡಲಾಗಿದೆ. ಗ್ಯಾರೇಜ್ ಸಂಶೋಧನೆಗಳಿಂದ ಹಿಡಿದು ಸಾಂಸ್ಥಿಕ ಸಂಶೋಧನೆಗಳವರೆಗೆ ಪ್ರೋತ್ಸಾಹ, ಸಹಕಾರವನ್ನು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಪ್ರಧಾನಿ ಮೋದಿ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ತುಂಬಿದ್ದಾರೆ. ದೇಶಕ್ಕೆ ದೂರದೃಷ್ಟಿಯ‌, ಶಕ್ತಿಯುತ ನಾಯಕ ಬೇಕಾಗುತ್ತದೆ. ಈ ಗುಣಗಳನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಕಾಣಬಹುದು’ ಎಂದರು.

ಅಮಿತ್ ಶಾ ತೃಪ್ತಿ: ಆರಗ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.