ಹೈದರಾಬಾದ್: ತಿರುಪತಿಯ ಲಾಡುಗಳನ್ನು ಸಿದ್ಧಪಡಿಸಲು ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂಬ ಚರ್ಚೆ ಇದೀಗ ಸನಾತನ ಧರ್ಮದ ವಿಚಾರದೆಡೆಗೆ ವಾಲಿದೆ.
‘ಸನಾತನ ಧರ್ಮದ ಕುರಿತು ವ್ಯಂಗ್ಯವಾಡುವವರು ನೂರು ಬಾರಿ ಯೋಚಿಸಬೇಕು, ಯಾವುದೇ ಕಾರಣಕ್ಕೂ ನಾವು ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಆಂಧ್ರಪ‍್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ.
‘ಜಾತ್ಯತೀತತೆ ಎಂಬುದು ಏಕಮುಖಿಯಲ್ಲ, ಎರಡು ಕಡೆಯಿಂದಲೂ ಅವಲಂಬಿಸಿರುತ್ತದೆ. ಹಿಂದೂಗಳ ಭಾವನೆಗಳು, ಆಚರಣೆಗಳು, ಸಂಪ್ರದಾಯಗಳು ಹಾಗೂ ಧರ್ಮಕ್ಕೆ ತೊಂದರೆ ನೀಡಿದವರನ್ನು ಕ್ಷಮಿಸಲು ಸಾಧ್ಯವಿಲ್ಲ. ಎಲ್ಲ ಧರ್ಮಿಯರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದ್ದು, ನಾನು ಕೂಡ ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ತಿಳಿಸಿದರು.
ವಿಜಯವಾಡದ ಶ್ರೀ ಕನಕದುರ್ಗಾ ದೇವಾಲಯದಲ್ಲಿ ನಡೆದ ‘ಪ್ರಾಯಶ್ಚಿತ ದೀಕ್ಷೆ’ ಅಂಗವಾಗಿ ದೇವಾಲಯದ ಮೆಟ್ಟಿಲುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ‘ತಿರುಪತಿಯಲ್ಲಿ ನಡೆದಂತಹ ಪ್ರಕರಣಗಳು ಮಸೀದಿ, ಚರ್ಚ್‌ನಲ್ಲಿ ನಡೆದಿದ್ದರೆ, ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರೆ? ಇಸ್ಲಾಂ ಕುರಿತು ಮಾತನಾಡಿದರೆ, ದಾಳಿಗಳಾಗುವ ಭಯವಿದ್ದು, ಮತಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇನ್ನಾದರೂ ಸನಾತನ ಧರ್ಮದ ಕುರಿತು ಮಾತನಾಡುವ ವೇಳೆ ನೂರು ಬಾರಿ ಯೋಚಿಸಬೇಕು, ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಪ್ರಕಾಶ್‌ರಾಜ್ ವಿರುದ್ಧ ಟೀಕೆ: ‘ಅತ್ಯಂತ ಸೂಕ್ಷ್ಮ ವಿಚಾರದ ಕುರಿತು ಮಾತನಾಡುವ ಮೊದಲು ನಟ ಪ್ರಕಾಶ್‌ರಾಜ್ ಯೋಚಿಸಬೇಕು. ಅವರು ನನ್ನ ಉತ್ತಮ ಸ್ನೇಹಿತರಾಗಿದ್ದು, ಗೌರವ ನೀಡುತ್ತೇನೆ. ಆದರೆ, ಸನಾತನ ಧರ್ಮದ ವಿರುದ್ಧ ಮಾತನಾಡುವವರನ್ನು ಕ್ಷಮಿಸಲು ಸಾಧ್ಯವಿಲ್ಲ. ನಾನು ಸನಾತನ ಧರ್ಮದ ಉಳಿವಿಗಾಗಿ ಹೋರಾಟ ನಡೆಸಲು ಸಿದ್ಧನಿದ್ದು, ಹಿಂದೂಗಳು ಹೊರಬಂದು ಹೋರಾಟದಲ್ಲಿ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಕಾರ್ತಿ ಕ್ಷಮೆಯಾಚನೆ: ತಿರುಪತಿ ಲಾಡು ಕುರಿತು ವ್ಯಂಗ್ಯವಾಡಿದ ತಮಿಳು ನಟ ಕಾರ್ತಿ ಅವರು ಮಂಗಳವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
‘ಗೌರವಾನ್ವಿತ ಪವನ್ ಕಲ್ಯಾಣ್ ಸರ್, ನಿಮ್ಮ ಮೇಲಿನ ಗೌರವದೊಂದಿಗೆ, ತಪ್ಪುಗ್ರಹಿಕೆಗೆ ಕಾರಣವಾದ ಮಾತಿನ ಕುರಿತು ನಿಮ್ಮ ಬಳಿ ಕ್ಷಮೆಯಾಚಿಸುತ್ತೇನೆ. ವೆಂಕಟೇಶ್ವರನ ಭಕ್ತನಾಗಿ ನಾನು ಕೂಡ ಸದಾ ಸಂಪ್ರದಾಯ ಎತ್ತಿಹಿಡಿಯಲು ಬದ್ಧನಾಗಿದ್ದೇನೆ’ ಎಂದು ‘ಎಕ್ಸ್’ ಮೂಲಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.