ಕೋಟಾ (ರಾಜಸ್ಥಾನ):ನೆಹರೂ–ಗಾಂಧಿ ಕುಟುಂಬ ಅಪಮಾನಿಸಿದ್ದ ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಪಾಯಲ್ ರೋಹ್ಟಗಿಗೆ ಬುಂಡಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ತಲಾ ₹25,000 ಬಾಂಡ್‌ನೊಂದಿಗೆ ಇಬ್ಬರು ಭದ್ರತೆ ನೀಡಬೇಕು ಎಂಬ ಷರತ್ತು ವಿಧಿಸಿ ಮಂಗಳವಾರ ಜಾಮೀನು ನೀಡಲಾಗಿದೆ. ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಸೋಮವಾರ ಜಾಮೀನು ನಿರಾಕರಿಸಲಾಗಿತ್ತು.
ನೆಹರೂ ಹಾಗೂ ಗಾಂಧಿ ಕುಟುಂಬವನ್ನು ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪ ಎದುರಿಸುತ್ತಿರುವ ಪಾಯಲ್ ಅವರನ್ನುಭಾನುವಾರ ರಾತ್ರಿ ಬಂಧಿಸಲಾಗಿತ್ತು. ಸೋಮವಾರ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿ ಬುಂಡಿ ಕೇಂದ್ರ ಜೈಲಿಗೆ ಕಳಿಸಲಾಗಿತ್ತು.
ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಸೆಪ್ಟೆಂಬರ್ 6 ಹಾಗೂ 21ರಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿರುವ ಆರೋಪವನ್ನು ಪಾಯಲ್ ಎದುರಿಸುತ್ತಿದ್ದಾರೆ.ರಾಜಸ್ಥಾನ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚರ್ಮೇಶ್ ಶರ್ಮಾ ದೂರು ನೀಡಿದ್ದರು.
ಪಾಯಲ್ ವಿರುದ್ಧ ಐಟಿ ಕಾಯ್ದೆ ವಿಧಿ 67 (ವಿದ್ಯುನ್ಮಾನ ಮಾಧ್ಯಮದಲ್ಲಿ ಆಕ್ಷೇಪಾರ್ಹ ಮಾಹಿತಿ ಪ್ರಕಟಣೆ), ವಿಧಿ 504 (ಅಪಮಾನಿಸುವ ಮತ್ತು ಶಾಂತಿಗೆ ಭಂಗ ಉಂಟು ಮಾಡುವ ಉದ್ದೇಶ) ಮತ್ತು ಐಪಿಸಿ ವಿಧಿ 505 (ವದಂತಿಗಳ ಪ್ರಚಾರ) ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡಿದ್ದ ವಿಡಿಯೊದಲ್ಲಿ ಪಾಯಲ್ ಅವರು, ‘ಮೋತಿಲಾಲ್ ನೆಹರೂ ಅವರು ಜವಹರಲಾಲ್ ನೆಹರೂ ಅವರ ನಿಜವಾದ ತಂದೆಯಲ್ಲ’ ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.