ADVERTISEMENT

370ನೇ ವಿಧಿ ಮರುಸ್ಥಾಪನೆ ಕುರಿತು ಖರ್ಗೆ ಹೇಳಿಕೆ: NCಯಿಂದ ವಿವರಣೆ ಕೇಳಿದ PDP

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 10:17 IST
Last Updated 16 ನವೆಂಬರ್ 2024, 10:17 IST
ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ
ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ   

ಶ್ರೀನಗರ: ‘ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷವನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಆಗ್ರಹಿಸಿದ್ದಾರೆ.

‘ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮರಳಿ ಸ್ಥಾಪಿಸಲು ಕಾಂಗ್ರೆಸ್ ಬಯಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹಾಗಿದ್ದರೆ ಅದನ್ನು ಯಾರು, ಎಲ್ಲಿ ಹೇಳಿದರು’ ಎಂಬ ಹೇಳಿಕೆಯನ್ನು ಖರ್ಗೆ ಅವರು ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸುವಂತೆ ಅವರು ಒತ್ತಾಯಿಸಿದ್ದಾರೆ.

‘ಈ ಸರ್ಕಾರಕ್ಕೆ ಜನರ ಬೆಂಬಲ ದೊರೆತಿದೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ಸಂವಿಧಾನದ 370ನೇ ವಿಧಿ ಎಂಬುದು ಜಮ್ಮು ಮತ್ತು ಕಾಶ್ಮೀರ ಜನರ ಭಾವನಾತ್ಮಕ ಸಂಗತಿಯಾಗಿದೆ. ಈ ವಿಷಯ ಕುರಿತು ಈಗಾಗಲೇ ಸಂಸತ್ತಿನಲ್ಲಿ ನಿರ್ಧಾರವಾಗಿದೆ. ಅದನ್ನು ಮತ್ತೊಮ್ಮೆ ಬಡಿದೆಬ್ಬಿಸುತ್ತಿರುವುದರ ಹಿಂದೆ ನಿಮಗೆ ಯಾವ ಸಕಾರಣವಿದೆ. ಸಮಾಜ ಮತ್ತು ಜನರನ್ನು ವಿಭಜಿಸುವ ಹುನ್ನಾರವೇ? ಒಂದೊಮ್ಮೆ ನಿಮ್ಮ ಉದ್ದೇಶ ಇದೇ ಆಗಿದ್ದರೆ, ಕಾಶ್ಮೀರದಲ್ಲಿ ಚುನಾವಣೆ ಮುಗಿದಿದ್ದು, ಅಲ್ಲಿಯೇ ಹೋಗಿ ಇದನ್ನೇ ಹೇಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ತನ್ನ ನಿರ್ಣಯವನ್ನು ಕಳುಹಿಸಿದೆ. ಆದರೆ ಅದು ಅಸ್ಪಷ್ಟವಾಗಿದೆ. ಇದನ್ನು ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಸ್ಪಷ್ಟಪಡಿಸಬೇಕು’ ಎಂದು ಪಿಡಿಪಿ ಅಧ್ಯಕ್ಷೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.