ADVERTISEMENT

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮೆಹಬೂಬಾ ಮುಫ್ತಿ

ಪಿಟಿಐ
Published 28 ಆಗಸ್ಟ್ 2024, 11:37 IST
Last Updated 28 ಆಗಸ್ಟ್ 2024, 11:37 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪೀಪಲ್ಸ್‌ ಡೆಮಾಕ್ರೆಟಿಕ್‌ ಪಕ್ಷದ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾದರೂ ಪಕ್ಷದ ಕಾರ್ಯಸೂಚಿಯನ್ನು ಪೂರೈಸಲು ಸಾಧ್ಯವಿಲ್ಲದಿರುವುದೇ ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣ ಎಂದು ತಿಳಿಸಿದ್ದಾರೆ.

‘ಮುಖ್ಯಮಂತ್ರಿಯಾಗಿದ್ದಾಗ 2016ರಲ್ಲಿ 12 ಸಾವಿರ ಜನರ ಮೇಲಿದ್ದ ಎಫ್‌ಐಆರ್‌ಗಳನ್ನು ಹಿಂತೆಗೆದುಕೊಂಡಿದ್ದೆ. ಪ್ರತ್ಯೇಕವಾದಿಗಳಿಗೆ ಪತ್ರ ಬರೆದು ಮಾತುಕತೆಗೆ ಆಹ್ವಾನಿಸಿದ್ದೆ. ಈಗ ಹಾಗೆ ಮಾಡಲು ಸಾಧ್ಯವೇ? ಮುಖ್ಯಮಂತ್ರಿಯಾಗಿದ್ದಾಗ ಕದನ ವಿರಾಮವನ್ನು ತಂದಿದ್ದೆ. ಈಗ ಕದನ ವಿರಾಮ ತರಲು ಸಾಧ್ಯವೇ? ಮುಖ್ಯಮಂತ್ರಿಯಾಗಿ ಎಫ್‌ಐಆರ್ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲವೆಂದಾದರೆ, ಆ ಹುದ್ದೆಯಲ್ಲಿದ್ದು ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಇದೀಗ ತಮ್ಮ ನಿಲುವು ಬದಲಾಯಿಸಿದ ಒಮರ್ ಅಬ್ದುಲ್ಲ ಅವರ ಹಾಗೆ ನಿಮ್ಮ ನಿಲುವು ಬದಲಾಗುತ್ತದೆಯೇ ಎಂಬ ಪ್ರಶ್ನೆಗೆ, ‘ಒಬ್ಬ ಜವಾನನ ವರ್ಗಾವಣೆಗೂ ಗವರ್ನರ್ ಬಾಗಿಲಲ್ಲಿ ನಿಲ್ಲಬೇಕಾಗುತ್ತದೆ ಎಂದು ಒಮರ್ ಸ್ವತಃ ಹೇಳಿದ್ದಾರೆ. ಜವಾನನ ವರ್ಗಾವಣೆ ಮಾಡುವ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷದ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಸಾಧ್ಯವೇ ಎಂಬುವುದರ ಬಗ್ಗೆ ನಾನು ಯೋಚಿಸುತ್ತೇನೆ’ ಎಂದರು.

ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಕುರಿತು ಮಾತನಾಡಿದ ಅವರು, ಅಧಿಕಾರದ ಆಸೆಗಾಗಿ ಎರಡು ಪಕ್ಷಗಳು ಒಟ್ಟಿಗೆ ಸೇರಿವೆ ಎಂದರು.

‘2002ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಾಗ ನಮಗೊಂದು ಅಜೆಂಡಾ ಇತ್ತು. ಆಗ ಸೈಯದ್ ಅಲಿ ಗಿಲಾನಿ ಅವರನ್ನು ನಾವು ಜೈಲಿನಿಂದ ಬಿಡುಗಡೆ ಮಾಡಿದ್ದೆವು. 2014ರಲ್ಲಿ ಬಿಜೆಪಿ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಾಗಲೂ 370 ವಿಧಿಯನ್ನು ರದ್ದುಗೊಳಿಸದೇ ಇರುವುದು, ಪಾಕಿಸ್ತಾನ ಮತ್ತು ಹುರಿಯತ್‌ನೊಂದಿಗೆ ಮಾತುಕತೆ ನಡೆಸುವುದು ಮತ್ತು ಎಎಫ್‌ಎಸ್‌ಪಿಎ ರದ್ದುಗೊಳಿಸುವ ಅಜೆಂಡಾ ಹೊಂದಿದ್ದೆವು. ಆದರೆ, ಕಾಂಗ್ರೆಸ್ ಮತ್ತು ಎನ್‌ಸಿ ಮೈತ್ರಿ ಮಾಡಿಕೊಂಡಿರುವುದು ಕೇವಲ ಅಧಿಕಾರಕ್ಕಾಗಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.