ADVERTISEMENT

ಜಮ್ಮು–ಕಾಶ್ಮೀರ ಚುನಾವಣೆ: ಪಿಡಿಪಿ ಪ್ರಣಾಳಿಕೆ ಬಿಡುಗಡೆ

ಜಮ್ಮು–ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ಒದಗಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:47 IST
Last Updated 24 ಆಗಸ್ಟ್ 2024, 15:47 IST
<div class="paragraphs"><p>ಪೀಪಲ್ಸ್‌ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ</p></div>

ಪೀಪಲ್ಸ್‌ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ

   

ಶ್ರೀನಗರ: ವಿಧಾನಸಭಾ ಚುನಾವಣೆಗಾಗಿ ಪೀಪಲ್ಸ್‌ ಡೆಮಾಕ್ರಟಿಕ್ ಪಕ್ಷವು (ಪಿಡಿಪಿ) ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜಮ್ಮು–ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡುವ ಭರವಸೆ ನೀಡಿದೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಇತರ ಹಿರಿಯ ನಾಯಕರು ‘ಜನರ ಆಕಾಂಕ್ಷೆ’(ಪೀಪಲ್ಸ್ ಆಸ್ಪಿರೇಷನ್‌) ಎಂಬ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

ADVERTISEMENT

‘ಭಾರತ ಮತ್ತು ಪಾಕಿಸ್ತಾನದ ನಡುವಣ ರಾಜತಾಂತ್ರಿಕ ಬಾಂಧವ್ಯಕ್ಕೆ ಬೆಂಬಲ ನೀಡುವುದಾಗಿ ಮತ್ತು ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಸಂಪರ್ಕವನ್ನು ಹೆಚ್ಚಿಸುವ ಮೂಲಕ ವ್ಯಾಪಾರ ಮತ್ತು ಸಾಮಾಜಿಕ ವಿನಿಮಯದ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ’ ತಿಳಿಸಿದೆ.

‘370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಅಸಾಂವಿಧಾನಿಕವಾಗಿ ಮತ್ತು ಅಕ್ರಮವಾಗಿ ರದ್ದುಗೊಳಿಸಿದ್ದರಿಂದ ಕಾಶ್ಮೀರದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ’ ಎಂದು ಪಿಡಿಪಿ ಆರೋಪಿಸಿದೆ.

‘ಜಮ್ಮು ಮತ್ತು ಕಾಶ್ಮೀರದ ಮೂಲಕ ಮಧ್ಯ ಮತ್ತು ಉತ್ತರ ಏಷ್ಯಾವನ್ನು ಸಂಪರ್ಕಿಸುತ್ತಿದ್ದ ಹಳೆಯ ವ್ಯಾಪಾರ ಮಾರ್ಗದ ಮರುಸ್ಥಾಪನೆಗೆ ಪ್ರಯತ್ನಿಸುತ್ತೇವೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ವ್ಯಾವಹಾರಿಕ ಸಂಬಂಧದ ವೃದ್ಧಿಗೆ ಸಹಕರಿಸುತ್ತೇವೆ. ಪ್ರಾದೇಶಿಕ ಮುಕ್ತ ವ್ಯಾಪಾರಕ್ಕೆ ಅವಕಾಶ ಮತ್ತು ಪರಸ್ಪರ ಹಂಚಿಕೆಯ ಆರ್ಥಿಕ ಮಾರುಕಟ್ಟೆಯ ಸ್ಥಾಪನೆಗೆ ಒತ್ತಾಯಿಸುತ್ತೇವೆ’ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದೆ.

ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು

* ಸಾರ್ವಜನಿಕ ಸುರಕ್ಷತಾ ಕಾಯ್ದೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಶತ್ರು ಕಾಯ್ದೆ ಸೇನಾಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ಮರುಜಾರಿ

* ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ ಉಚಿತ ನೀರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರ್ಷಕ್ಕೆ 12 ಗ್ಯಾಸ್‌ ಸಿಲಿಂಡರ್‌ ಉಚಿತವಾಗಿ ವಿತರಣೆ ಎಲ್ಲ ಕುಟುಂಬಗಳಿಗೆ ಆಸ್ತಿ ತೆರಿಗೆ ರದ್ಧತಿ ಮತ್ತು ಆಸ್ತಿ ಖರೀದಿಸುವ ಮಹಿಳೆಯರಿಗೆ ಮುದ್ರಾಂಕ ಶುಲ್ಕ ರದ್ಧತಿ

* ಭಯೋತ್ಪಾದನೆಯ ಆರೋಪದಡಿ ಸರ್ಕಾರಿ ನೌಕರರನ್ನು ವಜಾಗೊಳಿಸಿರುವುದು ಮತ್ತು ಉದ್ಯೋಗ ಕಡಿತದ ಪ್ರಕರಣಗಳ ಮರುಪರಿಶೀಲನೆ. ಅಧಿಕಾರಕ್ಕೇರಿದ ಒಂದು ವರ್ಷದ ಒಳಗಾಗಿ ಖಾಲಿ ಇರುವ ಎಲ್ಲ ಸರ್ಕಾರಿ ಹುದ್ದೆಗಳ ಭರ್ತಿಗೊಳಿಸುವುದು. 60 ಸಾವಿರ ದಿನಗೂಳಿ ನೌಕರರನ್ನು ಕಾಯಂಗೊಳಿಸುವುದು. ಪ್ರವಾಸೋದ್ಯಮ ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದು

* ಭೂಮಿ ಮತ್ತು ಉದ್ಯೋಗದ ಹಕ್ಕಿನ ರಕ್ಷಣೆ. ಸರ್ಕಾರಿ ಗುತ್ತಿಗೆ ಮತ್ತು ಗಣಿ ಗುತ್ತಿಗೆಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ಕಲ್ಪಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.