ಗುವಾಹಟಿ: ಉಲ್ಫಾ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಸಂಘಟನೆಯ ಅರವಿಂದ ರಾಜಖೋವಾ ನೇತೃತ್ವದ ಬಣವು ಸರ್ಕಾರದ ಜೊತೆಗೆ ಮಾಡಿಕೊಂಡಿರುವ ತ್ರಿಪಕ್ಷೀಯ ಶಾಂತಿ ಒಪ್ಪಂದವನ್ನು ಸ್ವತಂತ್ರ ಬಣದ ನಾಯಕ ಪರೇಶ್ ಬರುವಾ ಭಾನುವಾರ ಟೀಕಿಸಿದ್ದಾರೆ.
ಕ್ರಾಂತಿಕಾರಿಗಳು ಗುರಿ ಮತ್ತು ಸಿದ್ಧಾಂತಗಳನ್ನು ತ್ಯಜಿಸಿದರೆ ರಾಜಕೀಯ ಪರಿಹಾರ ಸಿಗಲು ಸಾಧ್ಯವಿಲ್ಲ ಎಂದು ಬರುವಾ ಹೇಳಿದ್ದಾರೆ.
‘ಈ ಒಪ್ಪಂದ ನಮಗೆ ಅಚ್ಚರಿಯನ್ನಾಗಲಿ, ಆತಂಕ ಅಥವಾ ಆಕ್ರೋಶವನ್ನಾಗಲಿ ಉಂಟು ಮಾಡಿಲ್ಲ. ಆದರೆ, ನಾಚಿಕೆಯಾಗುವಂತೆ ಮಾಡಿದೆ. ಇಂತಹ ಒಪ್ಪಂದ ಆಗಬಹುದು ಎಂಬುದರ ಅರಿವು ನಮಗೆ ಇತ್ತು’ ಎಂದು ಬರುವಾ ಅವರು ಅಸ್ಸಾಂ ಸುದ್ದಿ ಮಾಧ್ಯಮ ‘ಪ್ರತಿದಿನ್ ಟೈಮ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸ್ವತಂತ್ರ ಬಣದೊಂದಿಗಿನ ಸಂಭಾವ್ಯ ಮಾತುಕತೆಗೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನಡೆಸಿರುವ ಚರ್ಚೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಶರ್ಮಾ ನನ್ನ ಜೊತೆ ಮಾತನಾಡಿದ್ದಾರೆ. ಮಾತುಕತೆಗೆ ಅವರು ಒತ್ತಾಸೆಯಾಗಿದ್ದಾರೆ. ಸುಮ್ಮನೆ ಮಾತನಾಡುವುದು ನಮ್ಮ ಉದ್ದೇಶವಲ್ಲ. ನಾವು ರಾಜಕೀಯ ಪರಿಹಾರಕ್ಕೆ ಆಗ್ರಹಿಸಿದ್ದೇವೆ. ಈ ಗುರಿ ಅಚಲ. ನಾವು ರಾಜ್ಯದ ಜನರಿಗೆ ಮೋಸ ಮಾಡುವುದಿಲ್ಲ’ ಎಂದಿದ್ದಾರೆ.
ಹಿಂಸಾಚಾರವನ್ನು ತ್ಯಜಿಸಿ, ಪ್ರಜಾಪ್ರಭುತ್ವದ ಮುಖ್ಯವಾಹಿನಿ ಸೇರಲು ಸಮ್ಮತಿಸಿರುವ ನಿಷೇಧಿತ ಉಲ್ಫಾ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಸಂಘಟನೆಯ ಅರವಿಂದ ರಾಜಖೋವಾ ನೇತೃತ್ವದ ಗುಂಪು, ಕೇಂದ್ರ ಮತ್ತು ಅಸ್ಸಾಂ ಸರ್ಕಾರದ ಜತೆ ಶಾಂತಿ ಒಪ್ಪಂದಕ್ಕೆ ಕಳೆದ ಶುಕ್ರವಾರ ಸಹಿ ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.