ಕೋಲ್ಕತ್ತ : ಗಡಿಯಾಚೆಯಿಂದ ಒಳನುಸುಳುವಿಕೆಯು ನಿಂತಾಗ ಮಾತ್ರವೇ ಪಶ್ಚಿಮ ಬಂಗಾಳದಲ್ಲಿ ಶಾಂತಿ ನೆಲೆಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಬಾಂಗ್ಲಾದೇಶದ ಗಡಿಯಲ್ಲಿ ನೂತನ ಪ್ಯಾಸೆಂಜರ್ ಬಂದರು ಟರ್ಮಿನಲ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧರಾಗಿದ್ದಾರೆ. ಈ ಪ್ರದೇಶದಲ್ಲಿ ಶಾಂತಿ ನೆಲಸಬೇಕಾದರೆ ಬಂದರುಗಳು ಪ್ರಮುಖ ಪಾತ್ರ ವಹಿಸುತ್ತವೆ. ಗಡಿಯಾಚೆಗಿನ ಜನರ ಕಾನೂನಾತ್ಮಕ ಸಂಚಾರಕ್ಕೆ ಅವಕಾಶವಿಲ್ಲದಿದ್ದಾಗ ಅಕ್ರಮ ಸಂಚಾರದ ವಿಧಾನಗಳು ಹುಟ್ಟಿಕೊಳ್ಳುತ್ತವೆ. ಅದು ದೇಶದ ಶಾಂತಿಯ ಮೇಲೆ ಪರಿಣಾಮ ಬಿರುತ್ತದೆ. ಒಳನುಸುಳುವಿಕೆ ನಿಂತಾಗ ಮಾತ್ರ ಬಂಗಾಳದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದರು.
‘ಬಂಗಾಳದ ಜನರು ಆರೋಗ್ಯ ಕ್ಷೇತ್ರದಲ್ಲಿನ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೇಂದ್ರದಿಂದ ನೀಡಲಾದ ಹಣದ ಬಹುಪಾಲು ಭಾಗವು ರಾಜ್ಯದ ಟಿಎಂಸಿ ಸರ್ಕಾರದ ಭ್ರಷ್ಟಾಚಾರಕ್ಕೆ ತುತ್ತಾಗಿದೆ. ಬಂಗಾಳದಲ್ಲಿ ಅಚ್ಛೆ ದಿನ್ 2026ರಿಂದ ಆರಂಭವಾಗಲಿದೆ ಎಂದರು. ಈ ಮೂಲಕ 2026ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಬದಲಾವಣೆ ತನ್ನಿ’ ಎಂದು ಜನರನ್ನು ಕೇಳಿಕೊಂಡರು.
ಯುಪಿಎ ಸರ್ಕಾರದ ಅಡಿಯಲ್ಲಿ 10 ವರ್ಷಗಳ ಅವಧಿಯಲ್ಲಿ ಬಂಗಾಳಕ್ಕೆ ನೀಡಿದ ಅನುದಾನ ಕೇವಲ ₹2,09,000 ಕೋಟಿ. ಆದರೆ ಮೋದಿ ಸರ್ಕಾರ 10 ವರ್ಷದ ಅವಧಿಯಲ್ಲಿ ₹7,74,000 ಕೋಟಿಯನ್ನು ನೀಡಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.