ನವದೆಹಲಿ: ಹಿಂಸಾಚಾರವನ್ನು ತ್ಯಜಿಸಿ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಷೇಧಿತ ಉಲ್ಫಾ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಸಂಘಟನೆಯ ಒಂದು ಗುಂಪು ಶುಕ್ರವಾರ ಕೇಂದ್ರ ಮತ್ತು ಅಸ್ಸಾಂ ಸರ್ಕಾರದ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಒಪ್ಪಂದ ರಾಜ್ಯದಲ್ಲಿ ಶಾಶ್ವತ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಒಪ್ಪಂದದ ಕುರಿತು ಶಾ ಅವರು ಹಂಚಿಕೊಂಡಿರುವ ಪೋಸ್ಟ್ ಅನ್ನು ಟ್ಯಾಗ್ ಮಾಡಿದ ಪ್ರಧಾನಿ ಮೋದಿ, 'ಶಾಂತಿ ಮತ್ತು ಅಭಿವೃದ್ಧಿಯತ್ತ ಅಸ್ಸಾಂನ ಪ್ರಯಾಣದಲ್ಲಿ ಇಂದು ಮಹತ್ವದ ಮೈಲಿಗಲ್ಲು. ಈ ಒಪ್ಪಂದ ಅಸ್ಸಾಂನಲ್ಲಿ ಶಾಶ್ವತ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ. ಏಕತೆ, ಬೆಳವಣಿಗೆ ಮತ್ತು ಸಮೃದ್ಧಿಯ ಭವಿಷ್ಯದತ್ತ ನಾವು ಸಾಗುತ್ತೇವೆ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಅಮಿತ್ ಶಾ ಅಸ್ಸಾಂ ಜನರಿಗೆ ಇದು ಸುವರ್ಣ ದಿನ ಎಂದು ಹೇಳಿದರು.
1979ರಲ್ಲಿ ‘ಸಾರ್ವಭೌಮ ಅಸ್ಸಾಂ’ ಸ್ಥಾಪನೆಯ ಬೇಡಿಕೆಯೊಂದಿಗೆ ಉಲ್ಫಾ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು. ಆ ಬಳಿಕ ಹಲವು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ ಕಾರಣ ಕೇಂದ್ರ ಸರ್ಕಾರ 1990ರಲ್ಲಿ ಈ ಸಂಘಟನೆಯನ್ನು ನಿಷೇಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.