ADVERTISEMENT

‘ಭಾರತದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಲು‘ ಪೆಗಾಸಸ್ ಬೇಹುಗಾರಿಕೆ: ರಾಹುಲ್‌

ಪಿಟಿಐ
Published 27 ಅಕ್ಟೋಬರ್ 2021, 14:05 IST
Last Updated 27 ಅಕ್ಟೋಬರ್ 2021, 14:05 IST
ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ
ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ   

ನವದೆಹಲಿ: ಪೆಗಾಸಸ್ ಬಳಸಿ ಬೇಹುಗಾರಿಕೆ ಆರೋಪದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಬುಧವಾರ ಮೂವರು ಸೈಬರ್‌ ತಜ್ಞರ ಸಮಿತಿಯನ್ನು ರಚಿಸಿದೆ. ಈ ಕ್ರಮವನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ 'ಮಹತ್ವದ ಹೆಜ್ಜೆ' ಎಂದು ಬಣ್ಣಿಸಿದರು.

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಕೇವಲ ಪ್ರಧಾನ ಮಂತ್ರಿ ಅಥವಾ ಗೃಹ ಸಚಿವರು ಪೆಗಾಸಸ್‌ ಕುತಂತ್ರಾಂಶ ಬಳಕೆಗೆ ಆದೇಶಿಸಿರಬಹುದು ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್‌ನ ಕ್ರಮದಿಂದಾಗಿ ಸತ್ಯ ಬಹಿರಂಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಸ್ರೇಲ್‌ನ ಬೇಹುಗಾರಿಕೆ ಕುತಂತ್ರಾಂಶವಾದ ಪೆಗಾಸಸ್ ಬಳಸಿಕೊಂಡು ದೇಶದ ಪ್ರಸಿದ್ಧ ವ್ಯಕ್ತಿಗಳು, ರಾಜಕಾರಣಿಗಳು, ಲೇಖಕರ ಮೇಲೆ ಬೇಹುಗಾರಿಕೆ ನಡೆಸಿವೆ ಎಂಬ ಆರೋಪದ ವರದಿಗಳು ಬಹಿರಂಗವಾಗಿದ್ದವು.

ADVERTISEMENT

ಕಳೆದ ಸಂಸತ್‌ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಈ ವಿಚಾರವನ್ನು ಪ್ರಸ್ತಾಪಿಸಿ, ತನಿಖೆಗೆ ಆಗ್ರಹಿಸಿದ್ದವು ಎಂದರು.

'ನಾವು ಮೂರು ಮೂಲಭೂತ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ–ಒಬ್ಬ ವ್ಯಕ್ತಿ ಖಾಸಗಿಯಾಗಿ ಪೆಗಾಸಸ್‌ ಬಳಕೆಗೆ ತರಲು ಸಾಧ್ಯವಿಲ್ಲ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ; ಹಾಗಾದರೆ, ಪೆಗಾಸಸ್‌ ಬಳಕೆಗೆ ಅನುಮತಿ ಕೊಟ್ಟವರು ಯಾರು, ಯಾವ ಸಂಸ್ಥೆ, ಯಾವ ವ್ಯಕ್ತಿ ಅದನ್ನು ಅನುಮೋದಿಸಿದರು. ಎರಡನೇ ಪ್ರಶ್ನೆ, ಯಾರ ವಿರುದ್ಧ ಅದನ್ನು ಬಳಸಲಾಗಿದೆ. ಅಂತಿಮವಾಗಿ, ಬೇರೆ ದೇಶಗಳಿಗೆ ನಮ್ಮ ಜನರ ಕುರಿತ ಮಾಹಿತಿ ದೊರೆತಿದೆಯೇ' ರಾಹುಲ್‌ ಪ್ರಶ್ನಿಸಿದರು.

ಪೆಗಾಸಸ್‌ ಬೇಹುಗಾರಿಕೆಯು 'ಭಾರತೀಯ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಪ್ರಯತ್ನವಾಗಿದೆ' ಎಂದಿರುವ ರಾಹುಲ್‌, 'ಈ ವಿಚಾರದ ತನಿಖೆಯನ್ನು ಸುಪ್ರೀಂ ಕೋರ್ಟ್‌ ವಹಿಸಿಕೊಂಡು ಮಹತ್ವದ ಕ್ರಮವನ್ನು ಕೈಗೊಂಡಿದೆ. ಇದರಿಂದ ಸತ್ಯ ಹೊರಬರುತ್ತದೆ ಎಂಬ ವಿಶ್ವಾಸವಿದೆ' ಎಂದರು.

'ಸಂಸತ್‌ನಲ್ಲಿ ನಾವು ಈ ಕುರಿತು ಮತ್ತೆ ದನಿ ಎತ್ತಲಿದ್ದೇವೆ ಹಾಗೂ ಚರ್ಚೆ ಮಾಡುತ್ತೇವೆ. ಆ ಚರ್ಚೆಯನ್ನು ಬಿಜೆಪಿ ಸಹಿಸುವುದಿಲ್ಲ ಎಂಬುದು ತಿಳಿದಿದೆ, ಅವರು ಅದನ್ನು ಖಂಡಿತವಾಗಿಯೂ ನಿಲ್ಲಿಸುತ್ತಾರೆ. ನಾವು ಆ ಚರ್ಚೆ ನಡೆಸಲು ಪ್ರಯತ್ನಿಸುತ್ತೇವೆ' ಎಂದು ಹೇಳಿದರು.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿತು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಪೀಠ ಹೇಳಿದೆ.

ಸೈಬರ್‌ ಸೆಕ್ಯುರಿಟಿ, ಡಿಜಿಟಲ್‌ ವಿಧಿವಿಜ್ಞಾನ, ನೆಟ್‌ವರ್ಕ್‌ ಹಾಗೂ ಹಾರ್ಡ್‌ವೇರ್‌ಗೆ ಸಂಬಂಧಿಸಿದ ತಜ್ಞರು ಪೆಗಾಸಸ್‌ ಬೇಹುಗಾರಿಕೆಯ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ದೇಶದ ಜನರ ಮೇಲೆ ಬೇಹುಗಾರಿಕೆಗೆ ಪೆಗಾಸಸ್‌ ಬಳಕೆಯಾಗಿದೆಯೇ ಎಂಬುದನ್ನು ಸಮಿತಿಯು ಪರಿಶೋಧಿಸಿ ನ್ಯಾಯಮೂರ್ತಿ ರವೀಂದ್ರನ್ ಅವರಿಗೆ ವರದಿ ಸಲ್ಲಿಸಲಿದೆ.

ಸುಪ್ರೀಂ ಕೋರ್ಟ್ ರಚಿಸಿರುವ ಮೂವರು ತಜ್ಞರ ಸಮಿತಿಯಲ್ಲಿ ನವೀನ್‌ ಕುಮಾರ್ ಚೌಧರಿ, ಪ್ರಬಾಹರನ್‌.ಪಿ ಹಾಗೂ ಅಶ್ವಿನ್‌ ಅನಿಲ್‌ ಗುಮಾಸ್ತೆ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.