ADVERTISEMENT

ವಿಚಾರಣೆ ಬಾಕಿ | ಮುಚ್ಚಿದ ಲಕೋಟೆ ಪ್ರಕ್ರಿಯೆಗೆ ಆಧಾರವಲ್ಲ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:26 IST
Last Updated 24 ಸೆಪ್ಟೆಂಬರ್ 2024, 16:26 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಸರ್ಕಾರಿ ಅಧಿಕಾರಿಯ ವಿರುದ್ಧ ತನಿಖೆ ನಡೆಯುತ್ತಿದೆ, ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದೆ ಎಂಬುದು ‘ಮುಚ್ಚಿದ ಲಕೋಟೆ ಪ್ರಕ್ರಿಯೆ’ ಆಧರಿಸಿ ಆ ಅಧಿಕಾರಿಗೆ ಸಿಗಬೇಕಿರುವ ಬಡ್ತಿಯನ್ನು ನಿರಾಕರಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಶಿಸ್ತುಕ್ರಮದ ಭಾಗವಾಗಿ ನೌಕರನಿಗೆ ಆರೋಪಣಾ‍ ಪತ್ರವನ್ನು ನೀಡಿದ್ದಾಗ ಅಥವಾ ಕ್ರಿಮಿನಲ್ ಕ್ರಮ ಜರುಗಿಸುವುದಕ್ಕೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದ್ದಾಗ ಮಾತ್ರ ನೌಕರನ ವಿರುದ್ಧ ಶಿಸ್ತು ಕ್ರಮ ಅಥವಾ ಕ್ರಿಮಿನಲ್ ಕ್ರಮ ಆರಂಭವಾಗಿದೆ ಎನ್ನಬಹುದು ಎಂದು ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಆರ್. ಮಹಾದೇವನ್ ಅವರು ಇದ್ದ ವಿಭಾಗೀಯ ಪೀಠವು ಪ್ರಕರಣವೊಂದರಲ್ಲಿ ಹೇಳಿದೆ.

‘ಆರೋಪಣಾ ಪತ್ರ ನೀಡಿದ ನಂತರದಲ್ಲಿ ಅಥವಾ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರದಲ್ಲಿ ಮಾತ್ರವೇ ಮುಚ್ಚಿದ ಲಕೋಟೆ ಪ್ರಕ್ರಿಯೆಯ ಮೊರೆಹೋಗಬಹುದು’ ಎಂದು ಪೀಠವು ಹೇಳಿದೆ. 

ADVERTISEMENT

ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠವು ವಜಾಗೊಳಿಸಿದೆ. ಇಲಾಖಾ ಬಡ್ತಿ ಸಮಿತಿಯು ಅಧಿಕಾರಿಯೊಬ್ಬರನ್ನು ಬಡ್ತಿಗೆ ‘ಅರ್ಹ’ ಎಂದು 2007ರಲ್ಲಿ ಪರಿಗಣಿಸಿದ್ದ ಕಾರಣಕ್ಕೆ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪೀಠವು ಕೇಂದ್ರಕ್ಕೆ ಸೂಚಿಸಿದೆ.

ಇದಕ್ಕೂ ಮೊದಲು, ಕೇಂದ್ರ ಆಡಳಿತ ನ್ಯಾಯಮಂಡಳಿಯು ‘ಮುಚ್ಚಿದ ಲಕೋಟೆಯನ್ನು ತೆರೆದು, ಅಧಿಕಾರಿಗೆ ಬಡ್ತಿ ನೀಡಬೇಕು’ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರವು ಹೈಕೋರ್ಟ್ ಮೊರೆ ಹೋಗಿತ್ತು. ಆದರೆ, ಕೇಂದ್ರದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.