ಅಯೋಧ್ಯೆ: ನಿನ್ನೆಯಷ್ಟೇ ಪ್ರಾಣ ಪ್ರತಿಷ್ಠಾಪನೆಗೊಂಡು ಅಯೋಧ್ಯೆಯಲ್ಲಿ ನೆಲೆನಿಂತ ಶ್ರೀರಾಮನ ದರ್ಶನಕ್ಕೆ ಇಂದು (ಜ.23) ಜನಸಾಗರ ಹರಿದುಬಂದಿದೆ. ನೂರಾರು ಭಕ್ತರು ಬೆಳಗಿನ ಜಾವ 3 ಗಂಟೆಯಿಂದಲೇ ದೇವಾಲಯದ ಎದುರು ನಿಂತು ಕಾಯುತ್ತಿದ್ದಾರೆ. ಸಮಯ ಕಳೆಯುತ್ತಿದ್ದಂತೆ ಉದ್ರೇಕಗೊಂಡ ಭಕ್ತರು, ಪೊಲೀಸರು ಹಾಕಿದ್ದ ಹಗ್ಗವನ್ನು ತಳ್ಳಿ ರಾಮಮಂದಿರದ ಆವರಣದ ಒಳಕ್ಕೆ ನುಗ್ಗಿದ್ದಾರೆ.
ರಾಮಮಂದಿರದ ಬಳಿ ನೂಕು ನುಗ್ಗಲು ಉಂಟಾಗುತ್ತಿರುವ ವಿಡಿಯೊವನ್ನು ಎಎನ್‌ಐ ಸುದ್ದಿ ಸಂಸ್ಥೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಇಂದಿನಿಂದ ಸಾರ್ವಜನಿಕ ದರ್ಶನಕ್ಕೆ ರಾಮ ಮಂದಿರ ಮುಕ್ತವಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ರಾಮನ ಚಿತ್ರವಿರುವ ಧ್ವಜ ಹಿಡಿದು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದಾರೆ.
ಭಕ್ತರು ಬಾಲರಾಮನ ದರ್ಶನಕ್ಕಾಗಿ ಎರಡು ಅವಧಿಯನ್ನು ನಿಗದಿಪಡಿಸಲಾಗಿದೆ. ಮೊದಲ ಅವಧಿಯು ಬೆಳಿಗ್ಗೆ 7ರಿಂದ 11.30ರವರೆಗೆ ಮತ್ತು ಎರಡನೇ ಅವಧಿಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಿಗದಿಪಡಿಸಲಾಗಿದೆ.
ನಿತ್ಯ ಸಂಜೆ 6.30ಕ್ಕೆ ವಿಶೇಷ ಭಜನೆ, ಶೃಂಗಾರ ಆರತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಬಾಲರಾಮನಿಗೆ ಆರತಿ ನೆರವೇರಲಿದ್ದು ಒಂದು ದಿನ ಮೊದಲೇ ಭಕ್ತರು ತಮ್ಮ ಸ್ಥಾನವನ್ನು ಕಾಯ್ದಿರಿಸಬೇಕು ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.