ADVERTISEMENT

ನೀಟ್ ಅಕ್ರಮ ಸೇರಿ ಪ್ರಮುಖ ಬೆಳವಣಿಗೆಗಳ ಬಗ್ಗೆ ಸೊಲ್ಲೆತ್ತದ ಮೋದಿ: ಖರ್ಗೆ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2024, 13:05 IST
Last Updated 24 ಜೂನ್ 2024, 13:05 IST
<div class="paragraphs"><p>ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ </p></div>

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ವಿಪಕ್ಷಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಇಂದು (ಸೋಮವಾರ) ಮೋದಿ ಅವರು ವಾಡಿಕೆಗಿಂತ ದೀರ್ಘ ಭಾಷಣವನ್ನು ಮಾಡಿದ್ದಾರೆ. ಆದರೆ, ದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಜನರು ನಿರೀಕ್ಷಿಸಿದ ಯಾವುದೇ ಒಂದು ಪ್ರಮುಖ ವಿಷಯಗಳ ಬಗ್ಗೆಯೂ ಮಾತನಾಡಿಲ್ಲ’ ಎಂದು ಟೀಕಿಸಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಹಲವು ವಿಷಯಗಳ ಕುರಿತು ಪ್ರಧಾನಿ ಮೋದಿ ಏನಾದರೂ ಮಾತನಾಡುತ್ತಾರೆ ಎಂದು ದೇಶದ ಜನರು ನಿರೀಕ್ಷಿಸುತ್ತಿದ್ದರು ಎಂದು ಹೇಳಿ, ಇತ್ತೀಚೆಗೆ ದೇಶದಲ್ಲಿ ನಡೆದ ಕೆಲವು ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿದ್ದಾರೆ.

  • ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಇತರೆ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಪ್ರಧಾನಿ ಮಾತನಾಡುತ್ತಾರೆ. ದೇಶದ ಯುವಜನತೆ ಬಗ್ಗೆ ಸಹಾನುಭೂತಿ ತೋರಿಸುತ್ತಾರೆ ಎಂದು ಜನತೆ ಕಾದಿದ್ದರು.

  • ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತದ ಕುರಿತು ಪ್ರಧಾನಿ ಮೋದಿ ಮೌನವಾಗಿದ್ದಾರೆ.

  • ಕಳೆದ 13 ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ಘಟನೆಗಳು ನಡೆಯುತ್ತಿವೆ. ಆದರೆ, ಈವರೆಗೆ ರಾಜ್ಯಕ್ಕೆ ಭೇಟಿ ನೀಡುವ ಕುರಿತು ಅವರು ತಲೆಕೆಡಿಸಿಕೊಂಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಹೊಸ ಹಿಂಸಾಚಾರದ ಕುರಿತು ಇಂದಿನ ಭಾಷಣದಲ್ಲಿ ಯಾವುದೇ ಕಾಳಜಿಯನ್ನು ವ್ಯಕ್ತಪಡಿಸಿಲ್ಲ.

  • ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹ, ದೇಶದಲ್ಲಿನ ಬೆಲೆ ಏರಿಕೆ, ರೂಪಾಯಿ ಮೌಲ್ಯದ ಐತಿಹಾಸಿಕ ಕುಸಿತ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಷೇರುಪೇಟೆಯ ಮಹಾಪತನ ಇದಾವುದರ ಕುರಿತು ಮೋದಿ ಮಾತನಾಡಿಲ್ಲ.

  • 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಮೋದಿ ಸರ್ಕಾರ ಇನ್ನೂ ಬಾಕಿ ಉಳಿಸಿಕೊಂಡಿದೆ ಮತ್ತು ಜನಗಣತಿ ನಡೆಸುವುದರ ಕುರಿತು ಮೌನವಾಗಿದೆ.

‘ಇವುಗಳ ಕುರಿತು ಒಂದೇ ಒಂದು ಮಾತನ್ನು ಆಡದ ಪ್ರಧಾನಿ ಮೋದಿ ಅವರು ವಿರೋಧ ಪಕ್ಷಕ್ಕೆ ಸಲಹೆಯನ್ನು ನೀಡುತ್ತಿದ್ದಾರೆ. 50 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿ ಕುರಿತು ನಮಗೆ ನೆನಪಿಸುತ್ತಿದ್ದೀರಿ. ಆದರೆ, ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿನ ಅಘೋಷಿತ ತುರ್ತು ಪರಿಸ್ಥಿತಿಯನ್ನು ನೀವು ಮರೆತಿದ್ದೀರಿ’ ಎಂದು ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಜನಾದೇಶ ವ್ಯಕ್ತವಾಗಿದೆ. ಅದರ ನಡುವೆಯೂ ಮೈತ್ರಿ ಮೂಲಕ ಎನ್‌ಡಿಎ ಸರ್ಕಾರ ರಚಿಸಿ ಪ್ರಧಾನಿಯಾಗಿದ್ದೀರಿ. ಅಂದ ಮೇಲೆ ಸೂಕ್ತ ರೀತಿಯಲ್ಲಿ ಕೆಲಸ ಮಾಡಬೇಕು. ಸಂಸತ್ತಿನಲ್ಲಿ ಜನರು ಚರ್ಚೆ ಬಯಸುತ್ತಾರೆಯೇ ವಿನಃ ಘೋಷಣೆಗಳನಲ್ಲ ಎಂಬುದನ್ನು ನೀವು ನೆನಪಿಟ್ಟುಕೊಳ್ಳಿ’ ಎಂದು ಖರ್ಗೆ ಕುಟುಕಿದ್ದಾರೆ.

‘ವಿಪಕ್ಷಗಳು ಮತ್ತು ‘ಇಂಡಿಯಾ’ ಮೈತ್ರಿಕೂಟ ಸಂಸತ್ತಿನಲ್ಲಿ ಒಮ್ಮತವನ್ನು ಬಯಸುತ್ತದೆ. ಸಂಸತ್ತಿನಲ್ಲಿ, ಬೀದಿಗಳಲ್ಲಿ ಮತ್ತು ಎಲ್ಲರ ಮುಂದೆ ನಾವು ಜನರ ಪರ ಧ್ವನಿಯನ್ನು ಎತ್ತುತ್ತಲೇ ಇರುತ್ತೇವೆ. ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. ಭಾರತೀಯ ಪ್ರಜಾಪ್ರಭುತ್ವ ಚಿರಾಯುವಾಗಲಿ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.