ಸರಾಯ್‌ಕೆಲಾ (ಜಾರ್ಖಂಡ್): ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ನುಸುಳುಕೋರರನ್ನು ಗುರುತಿಸಿ ಅವರನ್ನು ರಾಜ್ಯದಿಂದ ಹೊರಹಾಕಲು ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಸರಾಯ್‌ಕೆಲಾದಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನುಸುಳುಕೋರರ ವಶದಲ್ಲಿರುವ ಭೂಮಿಯನ್ನು ಮರಳಿ ಪಡೆಯಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
‘ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದೆ. ನುಸುಳುಕೋರರು ಇಲ್ಲಿನ ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳನ್ನು ಮದುವೆಯಾಗಿ, ಭೂಮಿ ಕಬಳಿಸುತ್ತಿದ್ದಾರೆ. ಬುಡಕಟ್ಟು ಮಹಿಳೆಯರನ್ನು ಮದುವೆಯಾಗಿರುವ ನುಸುಳುಕೋರರಿಗೆ ಭೂಮಿ ಸಿಗದಂತೆ ಮಾಡಲು ಕಾನೂನು ತರುತ್ತೇವೆ’ ಎಂದರು.
‘ನುಸುಳುಕೋರರ ವಿಷಯವನ್ನು ಎತ್ತಿದ್ದಕ್ಕೆ ಚಂಪೈ ಸೊರೇನ್ ಅವರಿಗೆ ಅವಮಾನ ಮಾಡಲಾಯಿತು. ಮಾತ್ರವಲ್ಲ, ಮುಖ್ಯಮಂತ್ರಿ ಸ್ಥಾನ ತೊರೆಯುವಂತೆ ಅವರ ಮೇಲೆ ಹೇಮಂತ್ ಸೊರೇನ್ ಒತ್ತಡ ಹೇರಿದರು’ ಎಂದು ಆರೋಪಿಸಿದರು.
ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಬಾಂಗ್ಲಾದೇಶದ ನುಸುಳುಕೋರರ ರಕ್ಷಣೆಗೆ ನಿಂತಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಕಾಪಾಡುವುದಷ್ಟೇ ಅವರ ಗುರಿ ಎಂದು ಟೀಕಿಸಿದರು.
₹ 1000 ಕೋಟಿ ಮೊತ್ತದ ನರೇಗಾ ಹಗರಣ, ₹ 300 ಕೋಟಿ ಮೊತ್ತದ ಭೂ ಹಗರಣ ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ₹ 1000 ಕೋಟಿ ಹಗರಣದಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟದ ನಾಯಕರು ಭಾಗಿಯಾಗಿದ್ದಾರೆ ಎಂದು ಆಪಾದಿಸಿದರು.
ಜಾರ್ಖಂಡ್ ಜನರು ಬದಲಾವಣೆ ಬಯಸಿದ್ದಾರೆ: ಮೋದಿ
ಜೆಎಂಎಂ ಮೈತ್ರಿಕೂಟ ಸರ್ಕಾರದ ದುರಾಡಳಿತದಿಂದ ರೋಸಿಹೋಗಿರುವ ಜಾರ್ಖಂಡ್‌ನ ಜನರು ಬದಲಾವಣೆ ಬಯಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಜಾರ್ಖಂಡ್‌ನಲ್ಲಿ ಬಿಜೆಪಿ ಕೈಗೊಂಡಿರುವ ‘ಮೇರಾ ಬೂತ್ ಸಬ್‌ಸೇ ಮಜ್‌ಬೂತ್’ ಅಭಿಯಾನದ ಅಂಗವಾಗಿ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಜೆಎಂಎಂ ಮತ್ತು ಆರ್‌ಜೆಡಿ ವಿರುದ್ಧ ಹರಿಹಾಯ್ದರು. ‘ಜೆಎಂಎಂ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ಜಾರ್ಖಂಡ್‌ನ ಜನರ ಆಹಾರ ಭೂಮಿಯನ್ನು ಕಸಿದುಕೊಂಡಿದೆ. ಇಲ್ಲಿನ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದೆ. ಆದ್ದರಿಂದ ಈ ಬಾರಿ ಸರ್ಕಾರವನ್ನು ಬದಲಿಸಲು ಜನರು ದೃಢಸಂಕಲ್ಪ ಮಾಡಿದ್ದಾರೆ’ ಎಂದರು. ‘ಇಲ್ಲಿ ಆಡಳಿತ ನಡೆಸುತ್ತಿರುವವರು ಕಳೆದ ಐದು ವರ್ಷಗಳಲ್ಲಿ ಹಲವು ಭರವಸೆಗಳನ್ನು ನೀಡಿದ್ದಾರೆ. ಆದರೆ ಬಹುತೇಕ ಭರವಸೆಗಳು ಸುಳ್ಳು ಎಂಬುದು ಜನರಿಗೆ ಈಗ ಮನವರಿಕೆಯಾಗಿದೆ’ ಎಂದು ಹೇಳಿದರು. ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತದಾನ ನವೆಂಬರ್ 13 ಹಾಗೂ 20ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.