ಶಿಮ್ಲಾ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟದ ಗೆಲುವಿನ ಕುರಿತು ಮಾತನಾಡಿರುವ ಬಿಜೆಪಿ ಸಂಸದೆ ಕಂಗನಾ ರನೌತ್ ದೇಶ ಒಡೆಯುವ ಕುರಿತು ಮಾತನಾಡುತ್ತಿದ್ದವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಭಂಟುರ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, ‘ಮಹಾರಾಷ್ಟ್ರದ ಜನರು ಅಭಿವೃದ್ಧಿ ಮತ್ತು ಸ್ಥಿರ ಸರ್ಕಾರಕ್ಕೆ ಮತ ನೀಡಿದ್ದಾರೆ. ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು. ರಾಜ್ಯದಲ್ಲಿ ‘ಮಹಾಯುತಿ’ ಮೈತ್ರಿಕೂಟದ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಂಗನಾ ಅಭಿನಂದನೆ ತಿಳಿಸಿದರು.
‘ಚುನಾವಣಾ ಪ್ರಚಾರದ ವೇಳೆ ಪ್ರತಿಯೊಂದು ಮಗುವು ‘ಮೋದಿ–ಮೋದಿ’ ಎಂದು ಜಪಿಸುವುದನ್ನು ನಾನು ನೋಡಿದ್ದೆ. ಪ್ರಪಂಚದಲ್ಲಿ ಪ್ರಧಾನಿ ಮೋದಿ ಅವರು ಅತ್ಯುನ್ನತ ನಾಯಕರಾಗಿದ್ದಾರೆ. ಬಿಜೆಪಿ ಒಂದು ಬ್ರಾಂಡ್ ಆಗಿದೆ. ಇಂದು, ದೇಶದ ಜನರು ಆ ಬ್ರಾಂಡ್‌ನಲ್ಲಿ ನಂಬಿಕೆ ಹೊಂದಿದ್ದಾರೆ’ ಎಂದು ಕಂಗನಾ ತಿಳಿಸಿದ್ದಾರೆ.
‘ಮೋದಿ ಅವರು ದೇಶದ ಉದ್ಧಾರಕ್ಕಾಗಿ ಜನಿಸಿದ್ದಾರೆ ಮತ್ತು ಅವರು ಅಜೇಯರು ಎಂದು ನಾನು ನಂಬುತ್ತೇನೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಕೂಡ ಬ್ರಾಂಡ್ ಆಗಿತ್ತು. ಆದರೆ, ಇಂದು ಅದು ಒಂದು ಪ್ರಾದೇಶಿಕ ಪಕ್ಷವಾಗಿದೆ. ಅಲ್ಲದೆ, ಜನರು ಆ ಪಕ್ಷದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆದಿತ್ತು. ಶನಿವಾರ ಮತ ಎಣಿಕೆ ನಡೆದಿದ್ದು, ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 235 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು 49 ಕ್ಷೇತ್ರ ಹಾಗೂ ಪಕ್ಷೇತರರು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.