ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಹಾಗೂ ಎನ್‌ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಅವಧಿಗೆ ಸರ್ಕಾರ ರಚನೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ನಡೆದ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ‘ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಕುತೂಹಲ ಇಲ್ಲ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮತ್ತೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂಬುವುದನ್ನು ಅರಿತುಕೊಂಡಿವೆ' ಎಂದರು.
ನಾವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ. ಆದ್ದರಿಂದ ದೇಶದ ಜನರು ಬಿಜೆಪಿಗೆ 370 ಸ್ಥಾನಗಳನ್ನು ಮತ್ತು ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ ಎಂದು ಪ್ರತಿಪಾದಿಸಿದರು.
2024ರ ಚುನಾವಣೆಯು ಎನ್‌ಡಿಎ ಮತ್ತು ವಿರೋಧ ಪಕ್ಷದ ನಡುವಿನ ಚುನಾವಣೆಯಾಗಿರುವುದಿಲ್ಲ. ಬದಲಿಗೆ ಅಭಿವೃದ್ಧಿ ಮತ್ತು ಕೇವಲ ಘೋಷಣೆಗಳನ್ನು ನೀಡುವವರ ನಡುವಿನ ಚುನಾವಣೆಯಾಗಿದೆ ಎಂದು ಶಾ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, 1947ರಲ್ಲಿ ದೇಶ ವಿಭಜನೆಗೆ ಅವರ ಪಕ್ಷವೇ ಕಾರಣವಾದ ಕಾರಣ ನೆಹರು-ಗಾಂಧಿ ವಂಶಸ್ಥರಿಗೆ ಅಂತಹ ಯಾತ್ರೆಯನ್ನು ಮುಂದುವರಿಸಲು ಯಾವುದೇ ಹಕ್ಕಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.