ಭೋಪಾಲ್ (ಮಧ್ಯಪ್ರದೇಶ): ರಾಜ್ಯದ ಜನರು ಶೀಘ್ರದಲ್ಲೇ ಸಿಎಂ ಚೌಹಾಣ್ ಅವರಿಗೆ ವಿದಾಯ ಹೇಳಲಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ.
ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಈಗ ಸುಳ್ಳು ಮತ್ತು ಘೋಷಣೆಗಳ ಯಂತ್ರವನ್ನು ಮುಚ್ಚುವ ಸಮಯ ಬಂದಿದೆ. ಮಧ್ಯಪ್ರದೇಶದ ಜನರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ವಿದಾಯ ಹೇಳಲಿದ್ದಾರೆ. ಕಳೆದ 18 ವರ್ಷಗಳಲ್ಲಿ ರಾಜ್ಯವನ್ನು ನಾಶ ಮಾಡಿದರು. ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಪ್ರತಿಯೊಂದು ವರ್ಗವೂ ಅತೃಪ್ತರಾಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಭಾರತೀಯ ಜನತಾ ಪಕ್ಷ ಮತ್ತು ಸಿಎಂ ಚೌಹಾಣ್ ಕೂಡ ಇದನ್ನು ಅರಿತುಕೊಂಡಿದ್ದಾರೆ" ಎಂದರು.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದೇನೆ ಎಂದು ಸಿಎಂ ಚೌಹಾಣ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಚೌಹಾಣ್ ಏನು ಹೇಳಬಹುದು? ಸೋಲುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರೂ ಮನೆಯಲ್ಲಿ ಕುಳಿತುಕೊಳ್ಳಬೇಕು. ಅವರಿಗೆ ಬೇರೆ ಪರಿಹಾರವಿಲ್ಲ ಎಂದರು.
ಮುಂಬರುವ ಚುನಾವಣೆಗೆ ಸಿಎಂ ಸೇರಿದಂತೆ ರಾಜ್ಯದ 24 ಸಚಿವರನ್ನು ಕಣಕ್ಕಿಳಿಸಿರುವ ಬಿಜೆಪಿಯ ನಾಲ್ಕನೇ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, “ಸಚಿವರನ್ನು ಕಣಕ್ಕಿಳಿಸಿರುವುದು ಒಳ್ಳೆಯದು. ಈ ಸಚಿವರು ಏನು ಮಾಡಿದ್ದಾರೆ ಎಂಬುವುದನ್ನು ಕ್ಷೇತ್ರಗಳು ಸ್ಪಷ್ಟವಾಗಿ ಹೇಳುತ್ತಿವೆ. ಈಗ ಜನರು ಅವರಿಗೆ ಉತ್ತರ ನೀಡುತ್ತಾರೆ’’ ಎಂದು ಕುಟುಕಿದರು.
ಈ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಲ್ಲಿ ಸೋಲುತ್ತದೆ ಎಂಬುದನ್ನು ಬಿಜೆಪಿಯೇ ನಿರ್ಧರಿಸಬೇಕು. ಯಾರನ್ನು ಬೇಕಾದರೂ ಕಣಕ್ಕಿಳಿಸಬಹುದು. ಆದರೆ ಸೋಲುವುದು ನಿಶ್ಚಿತ. ಮಧ್ಯಪ್ರದೇಶದ ಮತದಾರರು ಅವರನ್ನು ಚೆನ್ನಾಗಿ ಅರಿತಿದ್ದಾರೆ ಎಂದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಚುನಾವಣೆಗೆ ಸಜ್ಜಾಗಿದೆ. ಎಲ್ಲಾ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಲಿದ್ದು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಿಎಂ ಚೌಹಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆ ವೇಳಾಪಟ್ಟಿ ಪ್ರಕಟ:
ಮಿಜೋರಾಂ, ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ನವೆಂಬರ್ 7 ರಂದು ಮಿಜೋರಾಂ, 7 ಮತ್ತು 17 ರಂದು ಛತ್ತೀಸ್‌ಗಢ, 17ರಂದು ಮಧ್ಯಪ್ರದೇಶ, 23ರಂದು ರಾಜಸ್ಥಾನ ಮತ್ತು 30ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.