ADVERTISEMENT

8 ವರ್ಷ ಪೂರೈಸಿದ ಬಿಜೆಪಿ ಸರ್ಕಾರದಲ್ಲಿ ದುರಾಡಳಿತ, ದುರವಸ್ಥೆ: ಕಾಂಗ್ರೆಸ್

ಪಿಟಿಐ
Published 26 ಮೇ 2022, 13:42 IST
Last Updated 26 ಮೇ 2022, 13:42 IST
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಜಯ್ ಮಾಕೇನ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರು ಪಕ್ಷದ ಇತರೆ ನಾಯಕರ ಜೊತೆ ಬುಕ್‌ಲೆಟ್ ಅನ್ನು ಬಿಡುಗಡೆ ಮಾಡಿದರು    -ಪಿಟಿಐ ಚಿತ್ರ
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಜಯ್ ಮಾಕೇನ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರು ಪಕ್ಷದ ಇತರೆ ನಾಯಕರ ಜೊತೆ ಬುಕ್‌ಲೆಟ್ ಅನ್ನು ಬಿಡುಗಡೆ ಮಾಡಿದರು    -ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8ನೇ ವರ್ಷ ಪೂರೈಸಿರುವ ಬೆನ್ನಲ್ಲೇ, 8 ವರ್ಷಗಳ ಆಡಳಿತವು ದುರವಸ್ಥೆ ಮತ್ತು ದುರಾಡಳಿತವಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಅವಧಿಯಲ್ಲಿ ಹಣದುಬ್ಬರದ ಭಾರಿ ಏರಿಕೆ, ಉದ್ಯೋಗ ಕುಸಿತ ಮತ್ತು ಕೋಮು ಧೃವೀಕರಣವು ಈ ಸರ್ಕಾರದ ಹಾಲ್‌ಮಾರ್ಕ್ ಆಗಿದೆ ಎಂದು ಕಾಂಗ್ರೆಸ್ ದೂರಿದೆ.

ಗುರುವಾರ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲ ಮತ್ತು ಅಜಯ್ ಮಾಕೇನ್ ಅವರು, ‘ಸುಳ್ಳುಗಳು ಮತ್ತು ಘೋಷಣೆಗಳ ಮೂಲಕ ಜನರಿಗೆ ವಂಚನೆ ಮಾಡುವ ಮೂಲಕ ಬಿಜೆಪಿ ಸರ್ಕಾರವು ಎಲ್ಲ ದಾಖಲೆಗಳನ್ನು ಮುರಿದಿದೆ’ ಎಂದು ಹೇಳಿದರು.

ಜನರಿಗೆ ನೀಡಲಾಗಿದ್ದ ಒಳ್ಳೆಯ ದಿನ(ಅಚ್ಚೇದಿನ್)ದ ಭರವಸೆಯು ಕೇವಲ ಬಿಜೆಪಿ ಮತ್ತು ಹಲವು ಪಟ್ಟು ಆದಾಯ ಹೆಚ್ಚಿಸಿಕೊಂಡ ಕೆಲವೇ ಕೆಲವು ಉದ್ಯಮಿಗಳಿಗೆ ಮಾತ್ರವೇ ಸೀಮಿತವಾಗಿತ್ತು.ಹಲವು ವಲಯಗಳಲ್ಲಿ ಬಿಜೆಪಿಯ ವೈಫಲ್ಯಗಳನ್ನು ವಿವರಿಸುವ 8 ವರ್ಷಗಳು ಮತ್ತು 8 ವಂಚನೆಗಳು, ಬಿಜೆಪಿ ವೈಫಲ್ಯತೆ ಎಂಬ ಹಿಂದಿಯಲ್ಲಿರುವ ಬುಕ್‌ಲೆಟ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಜೆಪಿ ಕೈಗೊಂಡ ವಿನಾಶಕಾರಿ ನೀತಿಗಳಿಂದಾಗಿ ಭಾರತದ ಆರ್ಥಿಕತೆ ಕುಸಿದಿದೆ. ಬಿಜೆಪಿಯು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಚಿಂತೆಯೇ ಮಾಡಲ್ಲ ಎಂದು ಮಾಕೇನ್ ಹೇಳಿದರು.

ADVERTISEMENT

ಒಂದು ಕಾಲದಲ್ಲಿ ಅತಿ ವೇಗದ ಆರ್ಥಿಕತೆಯಾಗಿದ್ದ ಭಾರತವು ಇದೀಗ ಕುಸಿಯುವ ಹಾದಿಯಲ್ಲಿದೆ. ಹಣದುಬ್ಬರ ಮತ್ತು ನಿರುದ್ಯೋಗವು ಇದೇ ಮೊದಲ ಬಾರಿಗೆ ಏರಿಕೆಯಾಗಿದೆ. ಇದಕ್ಕಾಗಿ ಬಿಜೆಪಿಯ 8 ವರ್ಷಗಳ ದುರಾಡಳಿತಕ್ಕೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದರು.

8 ವರ್ಷಗಳ ಬಿಜೆಪಿ ಆಡಳಿತವು ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆಯೊಡ್ಡುತ್ತಿದೆ. ನಮ್ಮ ಗಡಿಗಳಲ್ಲಿ ಚೀನಾ ನಿರಂತರವಾಗಿ ನುಸುಳುತ್ತಿದೆ. ಆದರೆ, ನಮ್ಮ ಪ್ರಧಾನ ಮಂತ್ರಿ ಸುಮ್ಮನೆ ಕುಳಿತಿದ್ದಾರೆ.ಪ್ರಧಾನಿಯವರ 56 ಇಂಚಿನ ಎದೆ ಮತ್ತು ಅವರ ಕೆಂಪಾದ ಕಣ್ಣುಗಳಿಗೆ ಏನಾಯಿತು ಎಂದು ಸುರ್ಜೇವಾಲ ಪ್ರಶ್ನಿಸುವ ಮೂಲಕ 2014ರ ಲೋಕಸಭೆ ಚುನಾವಣೆ ವೇಳೆ ಚೀನಾವನ್ನು ಎದುರಿಸಲು 56 ಇಂಚಿನ ಎದೆಯಅಗತ್ಯವಿದೆ ಎಂಬ ಮೋದಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದರು.

‘ದೇಶದ ಶೇ 84ರಷ್ಟು ಭಾರತೀಯರ ಆದಾಯ ಕುಸಿದಿದೆ ಮತ್ತು 12 ಕೋಟಿ ಭಾರತೀಯರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಅಲ್ಲದೆ, 60 ಲಕ್ಷ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳು ಮುಚ್ಚಿಹೋಗಿವೆ. ಇದರಿಂದ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಹೆಚ್ಚಾಗಿದೆ. ಆದರೆ, ಕೆಲವು ಉದ್ಯಮಿಗಳ ಆದಾಯವು ಪ್ರತಿ ದಿನಕ್ಕೆ ₹1000 ಕೋಟಿ ಹೆಚ್ಚಾಗಿದೆ. ಬೆಲೆ ಏರಿಕೆಯು ಸಾಮಾನ್ಯ ಜನರನ್ನು ಬಾಧಿಸುತ್ತಿದ್ದರೆ, ಬಿಜೆಪಿಯು ಕೋಮು ಗಲಭೆಗಳು ಹೆಚ್ಚುತ್ತಿವೆ. ಈ ಮೂಲಕ ಬಿಜೆಪಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದೆ’ ಎಂದು ಸುರ್ಜೇವಾಲ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.