ಪುದುಚೇರಿ: ಮನೆಯಲ್ಲಿ ಪೂಜೆ ಮುಗಿಸಿ, ಎರಡು ತಾಸು ತಡವಾಗಿ ಕಚೇರಿಗೆ ಬರುವ ವಿಶೇಷ ಅನುಕೂಲವನ್ನು ಲೆಫ್ಟಿನೆಂಟ್ ಗವರ್ನರ್ ಡಾ. ತಮಿಳುಸಾಯಿ ಸೌಂದರರಾಜನ್ ಅವರು ಸರ್ಕಾರಿ ಮಹಿಳಾ ಸಿಬ್ಬಂದಿಗೆ ಮಾಡಿಕೊಟ್ಟಿದ್ದಾರೆ. ಈಗ ಮಹಿಳೆಯರು ಬೆಳಿಗ್ಗೆ 8.45ರ ಬದಲಿಗೆ 10.45ಕ್ಕೆ ಕಚೇರಿಗೆ ಬರಬಹುದಾಗಿದೆ.
ತಿಂಗಳ ಮೂರು ಶುಕ್ರವಾರಗಳಲ್ಲಿ ಮಾತ್ರವೇ ಈ ಅನುಕೂಲ ಮಾಡಿಕೊಡಲಾಗಿದೆ. ಜೊತೆಗೆ, ಪೊಲೀಸ್ ಇಲಾಖೆ, ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಅನುಕೂಲ ಇಲ್ಲ. ಈ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದೆ.
ಕೇವಲ ಮಹಿಳೆಯರು ಕಾರ್ಯನಿರ್ವಹಿಸುವ ಕಚೇರಿಗಳಲ್ಲಿ ಪಾಳಿ ಪ್ರಕಾರವಾಗಿ ಈ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.
‘ಮನೆಯಲ್ಲಿ ಪೂಜೆ ಮುಗಿಸಿ, ಕಚೇರಿಗೆ ಸಮಯಕ್ಕೆ ಸರಿಯಾಗಿ ಬರಲು ಮಹಿಳೆಯರು ಹರಸಾಹಸ ಪಡುತ್ತಿದ್ದಾರೆ. ಇದನ್ನು ತಪ್ಪಿಸಿ, ಭಕ್ತಿಯಿಂದ ಪೂಜೆ ಮುಗಿಸಿ, ಕಚೇರಿಗೆ ಎರಡು ತಾಸು ತಡವಾಗಿ ಬರುವಂತೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ಗುರುವಾರ ಹೇಳಿದ್ದರು.
‘ಮಹಿಳೆಯರು ಪೂಜೆ ಮುಗಿಸಿ ಕಚೇರಿಗೆ ತಡವಾಗಿ ಬರಲು ಅನುಮತಿ ನೀಡಬೇಕು ಎಂದು ಕೋರಿ ಸಿಬ್ಬಂದಿ ಮತ್ತು ಆಡಳಿತಾತ್ಮಕ ವ್ಯವಹಾರಗಳ ಸಚಿವಾಲಯವು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಪತ್ರ ಕಳುಹಿಸಿತ್ತು. ಇದಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರು ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.