ADVERTISEMENT

ಕೇಂದ್ರದ ನಡೆ ಪ್ರಜಾತಂತ್ರಕ್ಕೆ ಪೆಟ್ಟು: ಕಾಂಗ್ರೆಸ್‌

ಬ್ಯಾಂಕ್‌ ಖಾತೆಗಳ ಬಳಕೆಗೆ ಅನುಮತಿ: ಕಾಂಗ್ರೆಸ್‌ ನಾಯಕರ ಒತ್ತಾಯ

ಪಿಟಿಐ
Published 21 ಮಾರ್ಚ್ 2024, 23:05 IST
Last Updated 21 ಮಾರ್ಚ್ 2024, 23:05 IST
   

ನವದೆಹಲಿ: ಸ್ಥಗಿತಗೊಳಿಸಿರುವ ತನ್ನ ಬ್ಯಾಂಕ್‌ ಖಾತೆಗಳ ಬಳಕೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಪಕ್ಷ ಗುರುವಾರ ಮತ್ತೆ ಆಗ್ರಹಿಸಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶಗಳನ್ನು ಒದಗಿಸಬೇಕು ಎಂದು ಹೇಳಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸೋನಿಯಾ ಗಾಂಧಿ, ‘ಕಾಂಗ್ರೆಸ್‌ ಪಕ್ಷವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

ADVERTISEMENT

‘ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿ ಸಿರುವ ಈ ಕ್ರಮವು ಕಾಂಗ್ರೆಸ್‌ ಪಕ್ಷದ ಮೇಲಷ್ಟೆ ಅಲ್ಲ, ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರಿದೆ’ ಎಂದು ಹೇಳಿದರು.

‘ನಾವು ಈ ದಿನ ಪ್ರಸ್ತಾಪಿಸಿರುವ ವಿಷಯ ಬಹಳ ಗಂಭೀರವಾದುದು. ಕೇಂದ್ರ ಸರ್ಕಾರದ ಈ ನಡೆ ಕಾಂಗ್ರೆಸ್‌ ‍ಪಕ್ಷವನ್ನು ಮಾತ್ರವಲ್ಲ ನಮ್ಮ ಪ್ರಜಾ ಪ್ರಭುತ್ವದ ಮೂಲ ಆಶಯಕ್ಕೇ ಬಲವಾದ ಪೆಟ್ಟು ನೀಡಲಿದೆ’ ಎಂದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗೂ ಎಐಸಿಸಿ ಖಜಾಂಚಿ ಅಜಯ್‌ ಮಾಕನ್ ಸಹ ಇದ್ದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ, ‘ಚುನಾವಣೆಯಲ್ಲಿ ಹೋರಾಟ ನಡೆಸುವ ನಮ್ಮ ಸಾಮರ್ಥ್ಯವನ್ನೇ ನಾಶ ಮಾಡಲಾಗಿದೆ. ನಾವು ಚುನಾವಣಾ ಪ್ರಚಾರ ಕಾರ್ಯ ಮಾಡುವ ಶಕ್ತಿ ಕಳೆದುಕೊಂಡಿದ್ದೇವೆ’ ಎಂದು ಹೇಳಿದರು.

ಆದಾಯ ತೆರಿಗೆ ಬಾಕಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

‘ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತ ಮಾಡಿ, ಅದರಿಂದ ₹115.32 ಕೋಟಿಯಷ್ಟು ಮೊತ್ತವನ್ನು ಒತ್ತಾಯದಿಂದ ಪಡೆದುಕೊಂಡಿರುವ ಬಿಜೆಪಿ, ಆ ಮೂಲಕ ಸಾಮಾನ್ಯ ಜನರು ಕಾಂಗ್ರೆಸ್‌ಗೆ ನೀಡಿದ್ದ ದೇಣಿಗೆಗಳನ್ನು ಲೂಟಿ ಮಾಡಿದೆ’ ಎಂದು ಮಾಕನ್ ಆರೋಪಿಸಿದರು.

ಕಾಂಗ್ರೆಸ್‌ ಹೇಳಿಕೆ ಹಾಸ್ಯಾಸ್ಪದ: ನಡ್ಡಾ

ನವದೆಹಲಿ: ‘ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತ ಮಾಡಿರುವುದರಿಂದ ಹಣಕಾಸು ವಿಚಾರವಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ನ ಹೇಳಿಕೆ ಹಾಸ್ಯಾಸ್ಪದ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಗುರುವಾರ ಹೇಳಿದ್ದಾರೆ.

ತನ್ನ ಬ್ಯಾಂಕ್‌ ಖಾತೆಗಳನ್ನು ಸಕ್ರಿಯಗೊಳಿಸುವಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆಗ್ರಹಿಸಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿರುವ ನಡ್ಡಾ, ‘ಕಾಂಗ್ರೆಸ್‌ ತನ್ನ ಆಡಳಿತದ ಅವಧಿಯಲ್ಲಿ ಮಾಡಿರುವ ಹಗರಣಗಳಿಂದ ಸಂಗ್ರಹಿಸಿರುವ ಹಣವನ್ನು ಈ ಚುನಾವಣಾ ವೆಚ್ಚಕ್ಕೆ ಬಳಸಿಕೊಳ್ಳಲಿ’ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ನಡ್ಡಾ, ‘ತಾನು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಕಾಂಗ್ರೆಸ್‌ ಅಸಂಬದ್ಧವಾಗಿ ದೂಷಣೆ ಮಾಡುತ್ತಿದೆ. ವಾಸ್ತವದಲ್ಲಿ ಆ ಪಕ್ಷ ನೈತಿಕವಾಗಿ, ಬೌದ್ಧಿಕವಾಗಿ ದಿವಾಳಿಯಾಗಿದೆಯೇ ಹೊರತು ಆರ್ಥಿಕವಾಗಿ ಅಲ್ಲ’ ಎಂದಿದ್ದಾರೆ.

‘ಈ ಬಾರಿ ಜನರು ಕಾಂಗ್ರೆಸ್‌ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಲಿದ್ದಾರೆ. ಈ ಹೀನಾಯ ಸೋಲಿನ ಭಯದಿಂದ ಪಕ್ಷದ ಉನ್ನತ ನಾಯಕರು ಸುದ್ದಿಗೋಷ್ಠಿ ನಡೆಸಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಹರಿಹಾಯ್ದಿದ್ದಾರೆ’ ಎಂದೂ ಹೇಳಿದ್ದಾರೆ.

‘ಕಾಂಗ್ರೆಸ್‌ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ತನ್ನ ಸಂಕಷ್ಟಗಳಿಗೆ ಕೇಂದ್ರೀಯ ಸಂಸ್ಥೆಗಳನ್ನು ದೂಷಿಸುತ್ತಿದ್ದಾರೆ. ಐಟಿಎಟಿ ಅಥವಾ ದೆಹಲಿ ಹೈಕೋರ್ಟ್‌ ಆಗಲಿ ಬಾಕಿ ತೆರಿಗೆಯನ್ನು ಪಾವತಿಸುವ ಮೂಲಕ ನಿಯಮಗಳನ್ನು ಪಾಲಿಸುವಂತೆ ಕಾಂಗ್ರೆಸ್‌ಗೆ ಸೂಚಿಸಿದೆ. ಆದರೆ, ಪಕ್ಷ ಆ ಕೆಲಸ ಮಾಡುತ್ತಿಲ್ಲ’ ಎಂದು ನಡ್ಡಾ ಟೀಕಿಸಿದ್ದಾರೆ.

ಸರ್ವಾಧಿಕಾರಿ ನಡೆ: ಸಿದ್ದರಾಮಯ್ಯ

ಬೆಂಗಳೂರು: ‘ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಅಧಿಕಾರ ದುರುಪಯೋಗ ಮಾತ್ರವಲ್ಲ ವಿರೋಧ ಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆ. ಕಾನೂನುಬಾಹಿರವಾದ ಈ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು’ ಎಂದು ಚುನಾವಣಾ ಆಯೋಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಲೋಕಸಭಾ ಚುನಾವಣೆಯ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಪಕ್ಷವು ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆ ನ್ನುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದುರುದ್ದೇಶವಾಗಿದೆ. ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹಿಸಿರುವ ಹಣವೇ ಹೊರತು ದೊಡ್ಡ ಉದ್ಯಮಪತಿಗಳದ್ದಲ್ಲ’ ಎಂದಿದ್ದಾರೆ.

‘ಚುನಾವಣಾ ಬಾಂಡ್‌ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಬಿಜೆಪಿ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆಯೋಗ ತಕ್ಷಣ ಇದನ್ನು ಗಮನಿಸಿ, ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಸೋಲಿನ ಭಯ ಹುಟ್ಟಿಕೊಂಡಿದೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಂಡರೂ ವಾಸ್ತವ ಸ್ಥಿತಿ ಏನು ಎಂಬುದು ಮೋದಿಗೆ ಗೊತ್ತಿದೆ. ಈ ಭಯದ ಕಾರಣದಿಂದಲೇ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಸೇಡಿನ ಕ್ರಮಕ್ಕೆ ಮುಂದಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನರೇಂದ್ರ ಮೋದಿ ಅವರ ಹಿಂದಿರುವ ‘ದುಷ್ಟ ಶಕ್ತಿ’ಯು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.