ADVERTISEMENT

ಕೇರಳ: ದೇಗುಲಕ್ಕೆ ಯಾಂತ್ರಿಕ ಆನೆ‌ ದೇಣಿಗೆ ನೀಡಿದ ನಟಿ ಪ್ರಿಯಾಮಣಿ

ಪಿಟಿಐ
Published 19 ಮಾರ್ಚ್ 2024, 11:30 IST
Last Updated 19 ಮಾರ್ಚ್ 2024, 11:30 IST
ಕೊಚ್ಚಿಯ ತ್ರಿಕ್ಕಯಿಲ್‌ ಮಹಾದೇವ ದೇಗುಲಕ್ಕೆ ದೇಣಿಗೆಯಾಗಿ ನೀಡಲಾಗಿರುವ ಯಾಂತ್ರಿಕ ಆನೆ –ಪಿಟಿಐ ಚಿತ್ರ
ಕೊಚ್ಚಿಯ ತ್ರಿಕ್ಕಯಿಲ್‌ ಮಹಾದೇವ ದೇಗುಲಕ್ಕೆ ದೇಣಿಗೆಯಾಗಿ ನೀಡಲಾಗಿರುವ ಯಾಂತ್ರಿಕ ಆನೆ –ಪಿಟಿಐ ಚಿತ್ರ   

ಕೊಚ್ಚಿ: ಚಿತ್ರನಟಿ ಪ್ರಿಯಾಮಣಿ ಮತ್ತು ಲಾಭರಹಿತ ಸಂಸ್ಥೆಯಾದ ಪೆಟಾ (ಪೀಪಲ್‌ ಫಾರ್‌ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಅನಿಮಲ್ಸ್‌ ಇಂಡಿಯಾ) ಕೊಚ್ಚಿಯ ತ್ರಿಕ್ಕಯಿಲ್‌ ಮಹಾದೇವ ದೇಗುಲಕ್ಕೆ ಆನೆಯಷ್ಟೇ ಗಾತ್ರದ ಯಾಂತ್ರಿಕ ಆನೆಯನ್ನು ದೇಣಿಗೆಯಾಗಿ ನೀಡಿದ್ದಾರೆ.

‘ಜೀವಂತ ಆನೆಯನ್ನು ಬಳಸಿಕೊಳ್ಳದಿರಲು ದೇಗುಲವು ನಿರ್ಧರಿಸಿತ್ತು. ಆದ್ದರಿಂದ ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ವಿವಿಧ ಸಮಾರಂಭಗಳಲ್ಲಿ ಬಳಸಿಕೊಳ್ಳಲು ಅನುವಾಗುವಂತೆ ಮಹಾದೇವನ್‌ ಎಂಬ ಹೆಸರಿನ ಯಾಂತ್ರಿಕ ಆನೆಯನ್ನು ದೇಗುಲಕ್ಕೆ ನೀಡಲಾಗಿದೆ’ ಎಂದು ಪೆಟಾ ಪ್ರಕಟಣೆ ಭಾನುವಾರ ತಿಳಿಸಿದೆ.

‘ಇಂಥ ಆನೆಯನ್ನು ಕೇರಳದಲ್ಲಿ ಎರಡನೇ ಬಾರಿ ಪರಿಚಯಿಸಲಾಗುತ್ತಿದೆ. ‘ಮಹಾದೇವನ್‌’ನ ಉದ್ಘಾಟನೆಯನ್ನು ದೇಗುಲದಲ್ಲಿ ಭಾನುವಾರ ನೆರವೇರಿಸಲಾಯಿತು. ಈ ಸಂದರ್ಭ ಮಾಸ್ಟರ್‌ ವೇದರಥ ಹಾಗೂ ತಂಡದವರು ಚಂಡ ಮೇಳವನ್ನು ಪ್ರದರ್ಶಿಸಿದರು. ವೇಣು ಮರರ್‌ ಮತ್ತು ತಂಡದವರು ಪಂಚವಾದ್ಯಂ ಅನ್ನು ಪ್ರದರ್ಶಿಸಿದರು’ ಎಂದು ಹೇಳಿದೆ.‌

ADVERTISEMENT

‘ಪ್ರಾಣಿಗಳನ್ನು ಹಿಂಸಿಸದೇ ನಮ್ಮ ಶ್ರೀಮಂತ ಸಾಂಸ್ಕೃತಿಕ ಆಚರಣೆಗಳನ್ನು ಮತ್ತು ಪರಂಪರೆಗಳನ್ನು ನಿರ್ವಹಿಸುವುದೇ ತಂತ್ರಜ್ಞಾನದ ಪ್ರಗತಿಯಾಗಿದೆ’ ಎಂದು ಚಿತ್ರನಟಿ ಪ್ರಿಯಾಮಣಿ ಅವರು ಪೆಟಾ ಪ್ರಕಟಣೆ ಮುಖೇನ ತಿಳಿಸಿದ್ದಾರೆ.

ತ್ರಿಕ್ಕಯಿಲ್‌ ಮಹಾದೇವ ದೇಗುಲದ ಯಜಮಾನರಾದ ತೆಕ್ಕಿನಿಯೆಡತ್‌ ವಲ್ಲಭನ್ ನಂಬೂದರಿ ಅವರು, ‘ದೇವರು ಸೃಷ್ಟಿಸಿರುವ ಮನುಷ್ಯರಂತೆ ಪ್ರಾಣಿಗಳು ಸಹ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಕುಟುಂಬಗಳೊಡನೆ ಬಾಳಬೇಕೆಂದು ಬಯಸುತ್ತವೆ. ಈ ಮಹಾದೇವನ್‌ ಎಂಬ ಯಾಂತ್ರಿಕ ಆನೆಯನ್ನು ಬಳಸಿಕೊಳ್ಳಲು ಬಹಳ ಸಂತೋಷವಾಗುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.