ADVERTISEMENT

49 ಪ್ರಸಿದ್ಧರ ವಿರುದ್ಧ ದೂರು

ಪಿಟಿಐ
Published 27 ಜುಲೈ 2019, 19:48 IST
Last Updated 27 ಜುಲೈ 2019, 19:48 IST
   

ಮುಜಫ್ಫರಪುರ: ಗುಂಪು ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದ 49 ಖ್ಯಾತನಾಮರ ವಿರುದ್ಧ ದೇಶದ್ರೋಹ ಮತ್ತು ಇತರ ಆರೋಪಗಳನ್ನು ದಾಖಲಿಸುವಂತೆ ಬಿಹಾರ ನ್ಯಾಯಾಲಯದಲ್ಲಿ ಶನಿವಾರ ಅರ್ಜಿ ಸಲ್ಲಿಸಲಾಗಿದೆ.

ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಕೀಲ ಸುಧೀರ್‌ ಕುಮಾರ್‌ ಒಝಾ ಎನ್ನುವವರು ಈ ಅರ್ಜಿ ಸಲ್ಲಿಸಿದ್ದಾರೆ. 49 ಪ್ರಸಿದ್ಧರ ಪತ್ರಕ್ಕೆ ಪ್ರತ್ಯುತ್ತರ ನೀಡಿ ದ್ದ 61 ಖ್ಯಾತನಾಮರಲ್ಲಿದ್ದ ನಟಿ ಕಂಗನಾ ರಣಾವತ್‌ ಮತ್ತು ನಿರ್ದೇಶಕ ರಾದ ಮಧುರ್‌ ಭಂಡಾರ್ಕರ್‌, ವಿವೇಕ್‌ ಅಗ್ನಿಹೋತ್ರಿ ಅವರನ್ನು ಸಾಕ್ಷ್ಯದಾರರನ್ನಾಗಿ ಮಾಡಲಾಗಿದೆ.

‘49 ಪ್ರಸಿದ್ಧ ವ್ಯಕ್ತಿಗಳು ದೇಶದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೂ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಇವರು ಪ್ರತ್ಯೇಕತಾವಾದ ಪ್ರವೃತ್ತಿಗೆ ಬೆಂಬಲ ನೀಡಿದ್ದಾರೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.’

ADVERTISEMENT

ಧಾರ್ಮಿಕ ಭಾವನೆಗಳಿಗೆ ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಪ್ರಯತ್ನವನ್ನು ಈ 49 ಜನ ಪ್ರಸಿದ್ಧರು ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಅರ್ಜಿಯ ವಿಚಾರಣೆ ಆಗಸ್ಟ್‌ 3ರಂದು ನಡೆಯುವ ಸಾಧ್ಯತೆ ಇದೆ.

ಅಡೂರ್‌ಗೆ ಪಿಣರಾಯಿ ಬೆಂಬಲ

ತಿರುವನಂತಪುರ(ಪಿಟಿಐ): ಹೆಚ್ಚುತ್ತಿರುವ ಗುಂಪು ಹಲ್ಲೆ ಪ್ರಕರಣಗಳು ಮತ್ತು ಜೈಶ್ರೀರಾಮ್‌ ಘೋಷಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಚಲನಚಿತ್ರ ನಿರ್ದೇಶಕ ಅಡೂರ್‌ ಗೋಪಾಲಕೃಷ್ಣನ್‌ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶನಿವಾರ ಭೇಟಿಯಾಗಿ ಬೆಂಬಲ ಸೂಚಿಸಿದರು.

ಜೈ ಶ್ರೀರಾಮ್‌ ಘೋಷಣೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದಿದ್ದರೆ ಚಂದ್ರನ ಬಳಿ ತೆರಳುವಂತೆ ಅಡೂರ್‌ ಅವರಿಗೆ ಬಿಜೆಪಿ ಕೇರಳ ರಾಜ್ಯ ಘಟಕದ ವಕ್ತಾರ ಬಿ. ಗೋಪಾಲಕೃಷ್ಣನ್‌ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು.

'ಬಿಜೆಪಿ ನಾಯಕರು ಸಹ ಇಂತಹ ಹೇಳಿಕೆಗಳನ್ನು ಬೆಂಬಲಿಸುತ್ತಿದ್ದಾರೆ. ಕೇರಳದ ಜನತೆ ಒಗ್ಗಟ್ಟಿನಿಂದ ಅಡೂರ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜಾತ್ಯತೀತ ಶಕ್ತಿಗಳು ರಾಜ್ಯದ ವಿಭಿನ್ನ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಕಾಪಾಡುತ್ತವೆ’ ಎಂದು ಪಿಣರಾಯಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.