ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳಿಗೆ ನೀಡಲಾದ ಶಿಕ್ಷೆ ವಿನಾಯಿತಿಯನ್ನು ಪ್ರಶ್ನಿಸಿರುವ ಅರ್ಜಿದಾರರು ‘ಅಧಿಕ ಪ್ರಸಂಗಿಗಳು ಮತ್ತು ತಂಟೆಕೋರರೇ’ ಹೊರತು ಬೇರೇನೂ ಅಲ್ಲ ಎಂದು ಗುಜರಾತ್ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
‘ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ಅಪರಾಧಿಗಳ ಕ್ಷಮಾಪಣೆಗೆ ತನಿಖಾ ಸಂಸ್ಥೆಯು ಕೇಂದ್ರದಿಂದ ಸೂಕ್ತ ಆದೇಶಗಳನ್ನು ಪಡೆದುಕೊಂಡಿದೆ’ ಎಂದೂ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
ಬಿಲ್ಕಿಸ್ ಬಾನು ಪ್ರಕರಣದ ಆಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಲಕ್ನೋ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಯಾಗಿರುವ ರೂಪ್ ರೇಖಾ ವರ್ಮಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
‘ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಪಿಐಎಲ್ ಸಲ್ಲಿಸಿರುವ ಅರ್ಜಿದಾರರು ಪ್ರಕರಣದಲ್ಲಿ ನೊಂದವರಲ್ಲ. ಕೇವಲ ಅಧಿಕ ಪ್ರಸಂಗಿಗಳು ಎಂಬುದು ಅರ್ಜಿ ಸಲ್ಲಿಸಿದ ಸಂದರ್ಭವನ್ನು ಅವಲೋಕಿಸಿದರೆ ಸ್ಪಷ್ಟವಾಗುತ್ತದೆ. ಭಾರತದ ಸಂವಿಧಾನದ ವಿಧಿ 32ರ ಅಡಿಯಲ್ಲಿ ನೀಡಲಾದ ಹಕ್ಕನ್ನು ಅವರು ಬೇರೆ ಉದ್ದೇಶಕ್ಕಾಗಿ ಇಲ್ಲಿ ಬಳಸಿಕೊಂಡಿದ್ದಾರೆ’ ಎಂದು ಗುಜರಾತ್ ಸರ್ಕಾರದ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಮಯೂರ್‌ಸಿನ್ಹಾ ಮೆತುಭಾ ವಘೇಲಾ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸುಪ್ರೀಂ ಕೋರ್ಟ್‌ನ 1976ರ ತೀರ್ಪನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವ ರಾಜ್ಯ ಸರ್ಕಾರ, ‘ಅರ್ಜಿದಾರನು ಪ್ರಕರಣದಲ್ಲಿ ನೊಂದ ವ್ಯಕ್ತಿಯಾಗಿರಬೇಕು’ ಎಂದು ಪ್ರತಿಪಾದಿಸಿದೆ.
'ಪ್ರಸ್ತುತ ಪ್ರಕರಣದಲ್ಲಿ, ಈಗಾಗಲೇ 14 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ 11 ಅಪರಾಧಿಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಈ ಆದೇಶ ಅರ್ಜಿದಾರಿಗೆ ಯಾವ ರೀತಿಯಿಂದಲೂ, ಕಿಂಚಿತ್ತೂ ಸಂಬಂಧಿಸಿಲ್ಲ. ಹೀಗಾಗಿ ಅವರ ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ಸರ್ಕಾರ ಪ್ರತಿಪಾದಿಸಿದೆ.
ಅರ್ಜಿದಾರರು ಮೂರನೇ ವ್ಯಕ್ತಿಗಳು ಎಂದಿರುವ ಸರ್ಕಾರ, ಸಕ್ಷಮ ಪ್ರಾಧಿಕಾರ ಜಾರಿಗೊಳಿಸಿದ ಪರಿಹಾರ ಆದೇಶಗಳನ್ನು ಪ್ರಶ್ನಿಸಲು ಅವರಿಗೆ ಯಾವುದೇ ಅವಕಾಶವಿಲ್ಲ ಎಂದೂ ಹೇಳಿದೆ.
ರಾಜಕೀಯ ಉದ್ದೇಶ ಹೊಂದಿರುವ, ತಂಟೆಕೋರತನದ ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಅನ್ನು ಕೋರಿದೆ.
ಅರ್ಜಿದಾರರು ತಾವು ರಾಜಕೀಯ ಕಾರ್ಯಕರ್ತರು ಎಂದು ಪಿಐಎಲ್‌ನಲ್ಲಿ ಒಪ್ಪಿಕೊಂಡಿದ್ದಾರೆ. 11 ಅಪರಾಧಿಗಳಿಗೆ ನೀಡಲಾದ ಶಿಕ್ಷೆ ವಿನಾಯಿತಿಯನ್ನು ರದ್ದು ಮಾಡಬೇಕೆಂದು ಅರ್ಜಿಯಲ್ಲಿ ಕೋರಿರುವ ಅವರು, ಈ ವಿಚಾರವಾಗಿ ಯಾವ ಸಂಬಂಧ ಹೊಂದಿದ್ದಾರೆ ಎಂಬುದನ್ನು ಹೇಳಿಯೇ ಇಲ್ಲ ಎಂದೂ ಸರ್ಕಾರ ತನ್ನ ಉತ್ತರದಲ್ಲಿ ಉಲ್ಲೇಖಿಸಿದೆ.
‘ತಮ್ಮ ಮೂಲಭೂತ ಹಕ್ಕುಗಳಿಗೆ ಹೇಗೆ ಚ್ಯುತಿಯಾಗಿದೆ, ರಾಜ್ಯ ಸರ್ಕಾರದ ಕ್ರಮದಿಂದ ಅವರು ಹೇಗೆ ನೊಂದಿದ್ದಾರೆ ಎಂಬುದರ ಬಗ್ಗೆ ಅರ್ಜಿದಾರರು ರಿಟ್ ಅರ್ಜಿಯಲ್ಲಿ ಎಲ್ಲಿಯೂ ಹೇಳಿಯೇ ಇಲ್ಲ. ಈ ರಿಟ್ ಅರ್ಜಿಯಲ್ಲಿ ಅದೆಲ್ಲವೂ ಕಾಣೆಯಾಗಿದೆ’ ಎಂದು ಸರ್ಕಾರ ವಾದಿಸಿದೆ.
ಇದೆಲ್ಲದರ ನಂತರ, 11 ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ವಾಸ್ತವ ಮಾಹಿತಿಯನ್ನು ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ. 14 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳನ್ನು ಮುಂಚಿತವಾಗಿ ಬಿಡುಗಡೆ ಮಾಡುವ ಸಂಬಂಧ ಗುಜರಾತ್ ಸರ್ಕಾರ 1992 ರಲ್ಲೇ ಸುತ್ತೋಲೆ ಹೊರಡಿಸಿದೆ. ಈಗಿನ ಶಿಕ್ಷೆ ವಿನಾಯಿತಿಯು 1992 ರ ಸುತ್ತೋಲೆಯ ಅಡಿಯಲ್ಲಿ ಅಳವಡಿಸಿಕೊಂಡ ಕಾರ್ಯವಿಧಾನವಾಗಿದೆ. ಅದರ ಅಡಿಯಲ್ಲಿ ಆಗಸ್ಟ್ 10 ರಂದು 11 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಆಚರಣೆಯ ಪ್ರಯುಕ್ತ ಈ ಕೈದಿಗಳಿಗೆ ವಿನಾಯಿತಿ ನೀಡಿಲ್ಲ’ ಎಂದು ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ರಾಧೆ ಶ್ಯಾಮ್ ಎಂಬಾತನೂ ಸೆಪ್ಟೆಂಬರ್ 25 ರಂದು ಈ ಅರ್ಜಿಯನ್ನು ಪ್ರಶ್ನೆ ಮಾಡಿದ್ದ. ತನಗೆ ಮತ್ತು ಪ್ರಕರಣದ ಇತರ 10 ಅಪರಾಧಿಗಳಿಗೆ ನೀಡಲಾದ ವಿನಾಯಿತಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವವರಿಗೆ ಈ ಪ್ರಕರಣದಲ್ಲಿ ಯಾವ ಸಂಬಂಧವಿದೆ? ಪ್ರಕರಣದಲ್ಲಿ ಅವರು ಸಂಪೂರ್ಣ ಅಪರಿಚಿತರು ಎಂದು ವಾದಿಸಿದ್ದ.
11 ಅಪರಾಧಿಗಳಿಗೆ ನೀಡಲಾದ ಶಿಕ್ಷೆ ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಆಗಸ್ಟ್ 25 ರಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಗುಜರಾತ್ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೇಳಿತ್ತು. ಶಿಕ್ಷೆ ವಿನಾಯಿತಿ ಪಡೆದಿರುವ ಅಪರಾಧಿಗಳನ್ನು ಈ ವಿಷಯದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ಅರ್ಜಿದಾರರನ್ನು ಕೇಳಿಕೊಂಡಿತ್ತು.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಅಪರಾಧಿಗಳ ಶಿಕ್ಷೆ ವಿನಾಯಿತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.