ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (ಸಂವಿಧಾನದ 370ನೇ ವಿಧಿ) ರದ್ದತಿ ಸಂಬಂಧ ಕಣಿವೆ ರಾಜ್ಯದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯ ತೀರ್ಪು ಇಂದು ಹೊರಬರುವ ಸಾಧ್ಯತೆ ಇದೆ.
ರಾಜ್ಯದ ವಿಶೇಷ ಸ್ಥಾನಮಾನ ರದ್ದತಿಯಿಂದ ಆಗಬಹುದಾದ ಪ್ರತಿಭಟನೆಗಳನ್ನು ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ರಾಜ್ಯದ ಮೂವರ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರಿಗೆ ಗೃಹ ಬಂಧನ ವಿಧಿಸಲಾಗಿತ್ತು. ಜೊತೆಗೆ ಸ್ಥಾನಮಾನ ರದ್ದು ಮಾಡುವ ಒಂದು ದಿನ ಮೊದಲು (ಆಗಸ್ಟ್ 4 ರಂದು) ಮೊಬೈಲ್, ದೂರವಾಣಿ ಹಾಗೂ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ:ಸಂಪಾದಕೀಯ | ದಿಟ್ಟ ನಡೆ ಅನುಸರಿಸಿದ ಮಾರ್ಗ ಸರಿಯೇ?
ಸದ್ಯ ಹೆಚ್ಚಿನ ನಿರ್ಬಂಧಗಳನ್ನು ಸಡಿಸಲಾಗಿದೆಯಾದರೂ, ಪ್ರಮುಖ ರಾಜಕಾರಣಿಗಳ ಬಂಧನ ಮುಂದುವರಿದಿದೆ. ನಿರ್ಬಂಧ ವಿಧಿಸಿದ ಬರೋಬ್ಬರಿ 150 ದಿನಗಳ ಬಳಿಕ ಡಿಸೆಂಬರ್ 31 ರಂದು ಕಾಶ್ಮೀರದ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಸೇವೆ ಮತ್ತು ಮೊಬೈಲ್‌ಗಳಲ್ಲಿ ಕಿರು ಸಂದೇಶ ಸೇವೆಯನ್ನು ಪುನರಾರಂಭಿಸಲಾಗಿತ್ತು. ಮೊಬೈಲ್ ಸೇವೆ ಸಡಿಸಿಸಲಾಗಿದೆ. ಆದರೆ,ಅಂತರ್ಜಾಲ ಕಡಿತ ಮುಂದುವರಿದಿದೆ.
ನಿರ್ಬಂಧವನ್ನು ಪ್ರಶ್ನಿಸಿ ಕಾಶ್ಮೀರ ಟೈಮ್ಸ್ ಪತ್ರಿಕೆಯ ಸಂಪಾದಕ ಅನುರಾಧ ಭಾಸಿನ್, ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಸೇರಿ ಹಲವರು ಅರ್ಜಿ ಸಲ್ಲಿಸಿದ್ದರು. ಅರ್ಜಿಗಳಲ್ಲಿ ‘ರಾಜ್ಯದಲ್ಲಿವಿಧಿಸಲಾಗಿರುವ ನಿರ್ಬಂಧಗಳು ಮೂಲಭೂತ ಹಕ್ಕುಗಳ ಮಾತನಾಡುವ ಮತ್ತು ಅಭಿವ್ಯಕ್ತಿ ಸ್ವಾತಂತ್ಯದ ಸ್ಪಷ್ಟ ಉಲ್ಲಂಘನೆ. 19ನೇ ವಿಧಿ ಅನ್ವಯ ಇರುವ ಮುಕ್ತವಾಗಿ ಸಂಚರಿಸುವ ಹಕ್ಕನ್ನೂ ಮೊಟಕುಗೊಳಿಸಿವೆ’ ಎಂದು ವಾದಿಸಲಾಗಿದೆ.
ಇದನ್ನೂ ಓದಿ:‘ಭೂಸ್ವರ್ಗ– ಭೂನರಕ’ದ ನಡುವೆ
ನವೆಂಬರ್‌ನಲ್ಲಿ ನಡೆದ ವಿಚಾರಣೆ ವೇಳೆ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಸೆಕ್ಷನ್ 144ರ ಅನ್ವಯ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಸುಪ್ರೀಂಗೆ ಮಾಹಿತಿ ನೀಡಿತ್ತು. ನ್ಯಾಯಮೂರ್ತಿ ಎನ್.ವಿ.ರಮಣ, ಆರ್.ಸುಭಾಷ್ ರೆಡ್ಡಿ ಹಾಗೂ ಬಿ.ಆರ್.ಗವೈ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಲಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.