ಚೆನ್ನೈ: ಇಲ್ಲಿನ ರಾಜಭವನದ ಮುಖ್ಯದ್ವಾರದ ಮುಂಭಾಗ ವ್ಯಕ್ತಿಯೊಬ್ಬ ಬುಧವಾರ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ.
ಆರೋಪಿ ಕರುಕ್ಕ ವಿನೋದ್ (42) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೇನಾಂಪೇಟೆ ನಿವಾಸಿಯಾಗಿರುವ ವಿನೋದ್ ವಿರುದ್ಧ 14 ಕ್ರಿಮಿನಲ್ ಪ್ರಕರಣಗಳಿವೆ. ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ವಿವರಿಸಿದ್ದಾರೆ.
ಕಳೆದ ವರ್ಷ ಬಿಜೆಪಿ ಕಚೇರಿಗೆ ಪೆಟ್ರೋಲ್ ಬಾಂಬ್ ಎಸೆದಿದ್ದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ.
ಪೆಟ್ರೋಲ್ ಬಾಂಬ್ ಎಸೆತದಿಂದ ಯಾರಿಗೂ ಗಾಯಗಳಾಗಿಲ್ಲ ಮತ್ತು ಭದ್ರತಾ ಲೋಪವಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ದಕ್ಷಿಣ) ಪ್ರೇಮ್ ಆನಂದ್ ಸಿನ್ಹಾ ತಿಳಿಸಿದ್ದಾರೆ.
‘ಪೆಟ್ರೋಲ್ ಬಾಂಬ್ ಎಸೆತದಿಂದ ಬೆಂಕಿ ಅಥವಾ ಹೊಗೆ ಕಾಣಿಸಿಕೊಂಡಿಲ್ಲ. ಕೇವಲ ಬಾಟಲಿಯಷ್ಟೆ ಒಡೆದಿದೆ. ಆರೋಪಿಯಿಂದ ಇನ್ನಷ್ಟು ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದಿದ್ದಾರೆ.
ಪ್ರಕರಣವನ್ನು ಖಂಡಿಸಿರುವ ವಿರೋಧ ಪಕ್ಷ ಎಐಎಡಿಎಂಕೆ ಮತ್ತು ಬಿಜೆಪಿ, ಆಡಳಿತಾರೂಢ ಡಿಎಂಕೆಯ ವಿರುದ್ಧ ವಾಗ್ದಾಳಿ ನಡೆಸಿವೆ.
‘ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ’ ಎಂದು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.
‘ರಾಜಭವನ ಸಹ ಅಭದ್ರತೆಯಲ್ಲಿದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ’ ಎಂದು ವಿರೋಧಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.