ಚೆನ್ನೈ: ರಾಜಭವನದ ಆವರಣದ ಹೊರಭಾಗದಲ್ಲಿ ನಡೆದಿದ್ದ ಪೆಟ್ರೋಲ್ ಬಾಂಬ್ ದಾಳಿಯನ್ನು ಸಾಧಾರಣ ವಿಧ್ವಂಸಕ ಕೃತ್ಯ ಎಂಬುದಾಗಿ ಹೇಳುವ ಮೂಲಕ ಗ್ರೇಟರ್ ಚೆನ್ನೈ ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಪ್ರಕರಣ ಕುರಿತು ಸಮಗ್ರ ತನಿಖೆಗೆ ತಡೆ ಒಡ್ಡಿದ್ದಾರೆ ಎಂದು ರಾಜಭವನ ಗುರುವಾರ ಆರೋಪಿಸಿದೆ.
ಆದರೆ, ರಾಜಭವನದ ಈ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು, ಘಟನೆ ಕುರಿತು ಕಾನೂನು ಪ್ರಕಾರವೇ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ರಾಜಭವನದ ಕಾರ್ಯದರ್ಶಿ ಟಿ.ಸೆಂಗೊಟ್ಟೈಯನ್ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಪೊಲೀಸರ ನಡೆಯು, ಈ ದಾಳಿ ನಡೆಸಿದವರನ್ನು ರಕ್ಷಿಸುವ ಉದ್ದೇಶ ಹೊಂದಿದೆ ಎಂಬುದನ್ನು ತೋರಿಸುತ್ತದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಪೆಟ್ರೋಲ್ ಬಾಂಬ್ ದಾಳಿ ಕುರಿತು ರಾಜಭವನ ನೀಡಿದ್ದ ದೂರನ್ನು ಪೊಲೀಸರು ದಾಖಲಿಸಿಕೊಂಡಿಲ್ಲ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಸಣ್ಣ ಪ್ರಮಾಣದ ವಿಧ್ವಂಸಕ ಕೃತ್ಯ ಎಂಬುದಾಗಿ ದಾಖಲಿಸಿಕೊಳ್ಳುವ ಇಡೀ ಪ್ರಕರಣವನ್ನು ದುರ್ಬಲಗೊಳಿಸಿದ್ದಾರೆ. ತರಾತುರಿಯಲ್ಲಿ ಆರೋಪಿಯನ್ನು ಬಂಧಿಸಿ, ಮಧ್ಯರಾತ್ರಿಯಲ್ಲಿ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರುಪಡಿಸಲಾಯಿತು. ನಂತರ ಆತನನ್ನು ಜೈಲಿಗೆ ತಳ್ಳಲಾಗಿದೆ. ಆ ಮೂಲಕ ಸಮಗ್ರವಾದ ತನಿಖೆಗೆ ಅಡ್ಡಿಯನ್ನುಂಟು ಮಾಡಲಾಗಿದೆ. ಸಮಗ್ರ ತನಿಖೆ ನಡೆದಿದ್ದರೆ ದಾಳಿ ನಡೆಸಿದವರು ಯಾರು ಎಂಬುದು ಬಹಿರಂಗವಾಗುತ್ತಿತ್ತು’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಚೆನ್ನೈ ಪೊಲೀಸ್ ಆಯುಕ್ತ ಸಂದೀಪ್ ರಾಯ್ ರಾಥೋಡ್ ಅವರು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿಯಾಗಿ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಬಳಿಕ ರಾಜಭವನದ ಈ ಹೇಳಿಕೆ ಹೊರಬಿದ್ದಿದೆ.
ಪ್ರಕರಣಕ್ಕೆ ಸಂಬಂಧಿಸಿ, ಕರುಕ್ಕಾ ವಿನೋದ್ ಎಂಬಾತನನ್ನು ಬಂಧಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ವಿರುದ್ಧ ಐಪಿಸಿ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಸಾರ್ವಜನಿಕ ಸ್ವತ್ತುಗಳ (ಹಾನಿ ತಡೆ) ಕಾಯ್ದೆಯಡಿ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ.
ಬಿಜೆಪಿ ಕಚೇರಿ ಹಾಗೂ ಪೊಲೀಸ್ ಠಾಣೆ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣಗಳು ಸೇರಿದಂತೆ ವಿನೋದ್ ವಿರುದ್ಧ ಈಗಾಗಲೇ 7 ಪ್ರಕರಣಗಳಿವೆ.
ಡಿಜಿಪಿ ಪ್ರತಿಕ್ರಿಯೆ: ‘ಈ ಪ್ರಕರಣ ಕುರಿತು ರಾಜಭವನದ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ’ ಎಂದು ಡಿಜಿಪಿ ಶಂಕರ್ ಜೀವಲ್ ಹೇಳಿದ್ದಾರೆ.
‘ಚೆನ್ನೈ ಪೊಲೀಸರು ರಾಜಭವನಕ್ಕೆ ಭಾರಿ ಭದ್ರತೆಯನ್ನು ಒದಗಿಸಿದ್ದರು. ಕರ್ತವ್ಯದ ಮೇಲಿದ್ದ ಸಿಬ್ಬಂದಿ ಜಾಗರೂಕರಾಗಿದ್ದ ಕಾರಣದಿಂದಾಗಿಯೇ ಆರೋಪಿಯನ್ನು ತಕ್ಷಣವೇ ಬಂಧಿಸಲು ಸಾಧ್ಯವಾಯಿತು’ ಎಂದು ಅವರು ಹೇಳಿದ್ದಾರೆ.
‘ಕಳೆದ ವರ್ಷ ಏಪ್ರಿಲ್‌ನಲ್ಲಿ ಮಯಿಲಾಡುತ್ತುರೈನಲ್ಲಿ ರಾಜ್ಯಪಾಲರಿದ್ದ ವಾಹನದ ಮೇಲೆ ಕಲ್ಲುಗಳು ಹಾಗೂ ಬಡಿಗೆಗಳನ್ನು ಎಸೆಯಲಾಗಿತ್ತು ಎಂಬ ರಾಜಭವನದ ಹೇಳಿಕೆಯೂ ಸತ್ಯಕ್ಕೆ ದೂರವಾದದ್ದು’ ಎಂದು ಡಿಜಿಪಿ ಹೇಳಿದರು.
‘ಬುಧವಾರದ ಘಟನೆಗೆ ಸಂಬಂಧಿಸಿ ಸಿ.ಸಿ.ಟಿ.ವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಘಟನೆ ಕುರಿತು ಸಮಗ್ರ ಹಾಗೂ ನ್ಯಾಯಯುತ ತನಿಖೆ ನಡೆಸಲಾಗುವುದು’ ಎಂದೂ ಹೇಳಿದರು.
ತಮಿಳುನಾಡು ಕಾನೂನು ಸಚಿವ ಎಸ್.ರಘುಪತ ಅವರು ಘಟನೆಯನ್ನು ಖಂಡಿಸಿದ್ದಾರೆ. ‘ಈ ದಾಳಿ ಹಿಂದೆ ಡಿಎಂಕೆ ಮತ್ತು ಮಿತ್ರ ಪಕ್ಷಗಳ ಕೈವಾಡ ಇದೆ’ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.
‘ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ವಕೀಲರೊಬ್ಬರು, ಆರೋಪಿಯ ಪರವಾಗಿ ಜಾಮಿನು ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ಇದು ಸಂಶಯಾಸ್ಪದವಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.