ADVERTISEMENT

ನಿರ್ದಿಷ್ಟ ಸಮುದಾಯದ ಮುಖಂಡರು ಗುರಿ: ಪಿಎಫ್‌ಐ ಚಟುವಟಿಕೆ ಕುರಿತು ಎನ್‌ಐಎ ವರದಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 19:30 IST
Last Updated 24 ಸೆಪ್ಟೆಂಬರ್ 2022, 19:30 IST
   

ಕೊಚ್ಚಿ: ನಿರ್ದಿಷ್ಟ ಸಮು ದಾಯದ ಪ್ರಮುಖ ಮುಖಂಡರನ್ನು ಗುರಿ ಮಾಡಲು ಕುಮ್ಮಕ್ಕು ನೀಡು ವಂತಹ ಸಾಹಿತ್ಯವು ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಕಚೇರಿಗಳಲ್ಲಿ ಶೋಧ ನಡೆಸಿದ ವೇಳೆ ಸಿಕ್ಕಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಹೇಳಿದೆ.

ಕೇರಳದಲ್ಲಿ ಬಂಧಿಸಲಾದ 10 ಜನರನ್ನು ಕಸ್ಟಡಿಗೆ ಕೇಳುವುದಕ್ಕಾಗಿ ರಿಮಾಂಡ್ ವರದಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಲಷ್ಕರ್ ಎ ತಯಬಾ ಮತ್ತು ಇಸ್ಲಾಮಿಕ್ ಸ್ಟೇಟ್‌ನಂತಹ ಭಯೋತ್ಪಾದಕ ಸಂಘಟನೆಯನ್ನು ಸೇರುವಂತೆ ಯುವ ಜನರಿಗೆ ಪಿಎಫ್‌ಐ ಕುಮ್ಮಕ್ಕು ನೀಡಿದೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ.

ಹಿಂಸಾತ್ಮಕ ಜಿಹಾದ್‌ನ ಭಾಗವಾಗಿ ಭಯೋತ್ಪಾದನಾ ಕೃತ್ಯಗಳನ್ನು ಎಸಗುವ ಮೂಲಕ ದೇಶದಲ್ಲಿ ಇಸ್ಲಾಂ ಆಳ್ವಿಕೆ ಜಾರಿಗೆ ತರಲು ಪಿಎಫ್‌ಐ ಸಂಚು ರೂಪಿಸಿದೆ. ಸರ್ಕಾರದ ನೀತಿಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ನಿರ್ದಿಷ್ಟ ವರ್ಗವೊಂದರ ಜನರಲ್ಲಿ ಭಾರತದ ಬಗ್ಗೆ ಅಸಹನೆ ಮೂಡುವಂತೆ ಮಾಡಲಾಗಿದೆ. ದೇಶ ಮತ್ತು ಅದರ ಸಂಸ್ಥೆಗಳ ಮೇಲೆ ದ್ವೇಷ ಹುಟ್ಟುವಂತೆಯೂ ಮಾಡಲಾಗಿದೆ ಎಂದು ಎನ್ಐಎ ಆರೋಪಿಸಿದೆ.

ADVERTISEMENT

ಇತರ ಧರ್ಮಗಳ ಜನರನ್ನು ಭಯ ಪಡಿಸಲು, ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳು ಸಂಘಟಿತ ಅಪರಾಧ ಕೃತ್ಯಗಳು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪದೇಪದೇ ಭಾಗಿಯಾಗಿದ್ದಾರೆ. ಪಿಎಫ್‌ಐ ಗುರಿಯಾಗಿಸಲು ಬಯಸಿ ರುವ ವ್ಯಕ್ತಿಗಳ ಪಟ್ಟಿಯನ್ನು ನೋಡಿದರೆ, ಸಮುದಾಯದಲ್ಲಿ ಅಶಾಂತಿ ಮೂಡಿಸು ವಲ್ಲಿ ಈ ಸಂಘಟನೆಯು ಬಹಳ ಮುಂದಕ್ಕೆ ಹೋಗಿದೆ ಎಂಬುದು ತಿಳಿಯುತ್ತದೆ ಎಂದೂ ವರದಿಯಲ್ಲಿ ಆಪಾದಿಸಲಾಗಿದೆ.

ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ?

ಪಿಎಫ್‌ಐ ಕಾರ್ಯಕರ್ತರು ಪುಣೆಯಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆ ವೇಳೆ ಗುಂಪೊಂದು ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಘೋಷಣೆ ಕೂಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಪೊಲೀಸ್‌ ವಾಹನದಲ್ಲಿ ಕೂರಿಸುವ ಹೊತ್ತಿನಲ್ಲಿ ಈ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.