ADVERTISEMENT

ಅಂತರ್ಯುದ್ಧಕ್ಕೆ ಪಿಎಫ್‌ಐ ಸಂಚು: ಜಾರಿ ನಿರ್ದೇಶನಾಲಯ

ಪಿಟಿಐ
Published 18 ಅಕ್ಟೋಬರ್ 2024, 18:03 IST
Last Updated 18 ಅಕ್ಟೋಬರ್ 2024, 18:03 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯು ‘ಜಿಹಾದಿ’ ಚಟುವಟಿಕೆಗಳ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಚಳುವಳಿಯೊಂದನ್ನು ಹುಟ್ಟುಹಾಕುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಶುಕ್ರವಾರ ಹೇಳಿದೆ.

ಪಿಎಫ್‌ಐ ಸಂಘಟನೆಗೆ ಸೇರಿದವರು ಮತ್ತು ಅದರ ಫಲಾನುಭವಿಗಳಿಗೆ ಸೇರಿದ ₹35 ಕೋಟಿ ಮೊತ್ತದ ಆಸ್ತಿ ಮುಟ್ಟುಗೋಲು ಹಾಕಲಾಗಿದೆ ಎಂದು ಇ.ಡಿ ಹೊಸದಾಗಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.

‘2006 ರಲ್ಲಿ ಕೇರಳದಲ್ಲಿ ಆರಂಭವಾದ ಪಿಎಫ್‌ಐನ ನೈಜ ಉದ್ದೇಶಗಳು ಅದರ ನಿಬಂಧನೆಯಲ್ಲಿ ಹೇಳಲಾದ ಉದ್ದೇಶಗಳಿಗಿಂತ ಭಿನ್ನವಾಗಿದೆ’ ಎಂದು ಇ.ಡಿ ಆರೋಪಿಸಿದೆ. 

ADVERTISEMENT

‘ಜಿಹಾದಿ ಚಟುವಟಿಕೆಗಳ ಮೂಲಕ ಭಾರತದಲ್ಲಿ ಇಸ್ಲಾಮಿಕ್‌ ಚಳವಳಿಯನ್ನು ರೂಪಿಸುವುದು ಪಿಎಫ್‌ಐನ ನೈಜ ಉದ್ದೇಶ ಆಗಿತ್ತು. ಸಮಾಜದಲ್ಲಿ ಒಡಕು ಉಂಟುಮಾಡಿ ಅಂತರ್ಯುದ್ಧ ಆರಂಭಿಸುವ ಉದ್ದೇಶವನ್ನೂ ಹೊಂದಿತ್ತು’ ಎಂದಿದೆ.

‘ಅಹಿಂಸಾತ್ಮಕ ರೀತಿಯ ಪ್ರತಿಭಟನೆಯನ್ನು ಪ್ರತಿಪಾದಿಸುತ್ತಿರುವುದಾಗಿ ಸಂಘಟನೆ ಹೇಳಿಕೊಂಡಿದೆ. ಆದರೆ ಅದರ ಪ್ರತಿಭಟನೆಯ ವಿಧಾನಗಳು ಹಿಂಸಾತ್ಮಕವಾಗಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭಿಸಿವೆ’ ಎಂದು ಹೇಳಿದೆ.

ದೈಹಿಕ ಶಿಕ್ಷಣ ತರಗತಿಯ ಹೆಸರಿನಲ್ಲಿ ತನ್ನ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿಯನ್ನೂ ಪಿಎಫ್‌ಐ ನೀಡಿದೆ ಎಂದು ಇ.ಡಿ ಆರೋಪಿಸಿದೆ. ಚಾಕು ಮತ್ತು ಲಾಠಿಗಳನ್ನು ಬಳಸಿ ‘ಅಕ್ರಮಣಕಾರಿ ಮತ್ತು ರಕ್ಷಣಾತ್ಮಕ’ ತಂತ್ರಗಳನ್ನು ಕಲಿಸಿಕೊಟ್ಟಿದೆ. ಕತ್ತಿಯಂತಹ ಆಯುಧ ಬಳಸಿ ದಾಳಿ ಮಾಡುವ ‘ಹಿಂಸಾತ್ಮಕ’ ತರಬೇತಿಯನ್ನೂ ನೀಡಿದೆ ಎಂದು ಹೇಳಿದೆ.

‘ಸಿಂಗಪುರ ಅಲ್ಲದೆ ಕುವೈತ್‌, ಒಮಾನ್, ಕತಾರ್‌, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಗಲ್ಫ್‌ ದೇಶಗಳಲ್ಲಿ ಸಂಘಟನೆಯು 13 ಸಾವಿರಕ್ಕೂ ಅಧಿಕ ಸಕ್ರಿಯ ಸದಸ್ಯರನ್ನು ಹೊಂದಿತ್ತು’ ಎಂದು ತಿಳಿಸಿದೆ.

ಇ.ಡಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ವಿವಿಧ ರಾಜ್ಯಗಳ ಪೊಲೀಸರು ಪಿಎಫ್‌ಐ ಸಂಘಟನೆಯ ಪದಾಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದೇಶದಾದ್ಯಂತ ದಾಳಿ ನಡೆಸಿದ ಬೆನ್ನಲ್ಲೇ 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಈ ಸಂಘಟನೆಯನ್ನು ನಿಷೇಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.