ADVERTISEMENT

ಸಿಎಂ ಹುದ್ದೆಗೆ ರಾಜೀನಾಮೆ | ಭಾವನಾತ್ಮಕ ದಾಳ ಉರುಳಿಸಿದ ಕೇಜ್ರಿವಾಲ್‌: BJP ಟೀಕೆ

ಪಿಟಿಐ
Published 15 ಸೆಪ್ಟೆಂಬರ್ 2024, 10:57 IST
Last Updated 15 ಸೆಪ್ಟೆಂಬರ್ 2024, 10:57 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಂದಿನ ಎರಡು ದಿನಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸುವ ಮೂಲಕ ‘ಭಾವನಾತ್ಮಕ ದಾಳ ಉರುಳಿಸಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

‘ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನು ಸುಪ್ರೀಂ ಕೋರ್ಟ್‌ ಖುಲಾಸೆಗೊಳಿಸದ ಕಾರಣ ಅವರು ರಾಜೀನಾಮೆ ನೀಡುವುದಾಗಿ ನಾಟಕವಾಡುತ್ತಿದ್ದಾರೆ. ಕೇಜ್ರಿವಾಲ್‌ ಅವರಿಗೆ ಸದ್ಯ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ಇದರೊಂದಿಗೆ ಕೇಜ್ರಿವಾಲ್‌ರನ್ನು ಮುಖ್ಯಮಂತ್ರಿಯಿಂದ ಔಪಚಾರಿಕ ಮಂತ್ರಿಯನ್ನಾಗಿ ಪರಿವರ್ತಿಸಲಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಕಿಡಿಕಾರಿದ್ದಾರೆ.

‘ಕೇಜ್ರಿವಾಲ್‌ ರಾಜೀನಾಮೆ ಘೋಷಣೆಯು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಮಾಡುವ ಅವರ ಯೋಜನೆಯ ಒಂದು ಭಾಗವಾಗಿದೆ. ಕೇಜ್ರಿವಾಲ್ ಅವರು ಅವಶ್ಯಕತೆಗೆ ತಕ್ಕಂತೆ ಹೇಗೆ ವರ್ತಿಸಬೇಕೆಂದು ಪಿಎಚ್‌ಡಿ ಮಾಡಿದ್ದಾರೆ’ ಎಂದು ಪೂನಾವಾಲಾ ಗುಡುಗಿದ್ದಾರೆ.

ADVERTISEMENT

‘ಕೇಜ್ರಿವಾಲ್‌ ಅವರು ರಾಜೀನಾಮೆ ನೀಡಲು ಎರಡು ದಿನಗಳ ಸಮಯ ತೆಗೆದುಕೊಂಡಿದ್ದಾರೆ. ಏಕೆಂದರೆ ಭಾವನಾತ್ಮಕ ದಾಳ ಉರುಳಿಸುವ ಮೂಲಕ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ದೆಹಲಿಯ ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕೆ ಸಂಪೂರ್ಣ ಯೋಜನೆ ರೂಪಿಸಲಾಗಿದೆ’ ಎಂದು ಪೂನಾವಾಲಾ ಆರೋಪಿಸಿದ್ದಾರೆ.

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಇನ್ನೆರಡು ದಿನಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

‘ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣ ಪತ್ರ ನೀಡಿದ ನಂತರವೇ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ. ಅಗ್ನಿಪರೀಕ್ಷೆಗೆ ಒಳಪಡಲು ಸಿದ್ಧವಿರುವುದಾಗಿ’ ಎಂದು ಕೇಜ್ರಿವಾಲ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.