ಲಕ್ನೊ: ಸಶಸ್ತ್ರಧಾರಿ ದರೋಡೆಕೋರರು ಅಂಗವಿಕಲ ಪಾತ್ರೆ ವ್ಯಾಪಾರಿ ಮತ್ತು ಆತನ ತಾಯಿಗೆ ಬಂದೂಕು ತೋರಿಸಿ ನಗದು, ಒಡವೆ ದೋಚಿರುವ ಘಟನೆ ಇಲ್ಲಿನ ಠಾಕೂರ್‌ಗಂಜ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂದೂಕು, ಚಾಕುಗಳೊಂದಿಗೆ ಬಂದ ಮೂವರು ಮುಸುಕುಧಾರಿಗಳು ನಪಿಯರ್ ಕಾಲೋನಿಯಲ್ಲಿರುವ ಪಾತ್ರೆ ವ್ಯಾಪಾರಿ ಅಶ್ವಿನಿ ರಸ್ತೋಗಿ ಮತ್ತು ಆತನ ತಾಯಿ ರಾಜಕುಮಾರಿಯನ್ನು ಬೆದರಿಸಿ ಸುಮಾರು ₹3 ಲಕ್ಷ ನಗದು ಮತ್ತು ಮನೆಯಲ್ಲಿದ್ದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ.
ಗುರುವಾರ ಘಟನೆ ಸಂಭವಿಸಿದ್ದು ಮಳಿಗೆಗೆ ವಾರದ ರಜೆಯಿದ್ದ ಕಾರಣ ಅಶ್ವಿನಿ ರಸ್ತೋಗಿ ಮನೆಯಲ್ಲೇ ಇದ್ದರು. ಅವರು ಪೂಜೆಗೆಂದು ದೇವಸ್ಥಾನಕ್ಕೆ ತೆರಳಿದ್ದು, ಅವರ ತಾಯಿ ರಾಜಕುಮಾರಿ(75) ಒಬ್ಬರೇ ಮನೆಯಲ್ಲಿದ್ದರು. ಅಶ್ವಿನಿ ಪತ್ನಿ ಮತ್ತು ತಂದೆ ಇಬ್ಬರೂ ಕೆಲ ಕಾಲದ ಹಿಂದೆ ಮೃತರಾಗಿದ್ದರು. ಇದೆಲ್ಲ ವಿಷಯ ತಿಳಿದಿರುವ ದರೋಡೆಕೋರರು ಅಶ್ವಿನಿ ತಾಯಿ ಒಬ್ಬರೇ ಮನೆಯಲ್ಲಿ ಇರುವ ವೇಳೆ ಮನೆಗೆ ನುಗ್ಗಿದ್ದಾರೆ.
15 ನಿಮಿಷಗಳಲ್ಲಿ ಅಶ್ವಿನಿ ಪೂಜೆ ಮುಗಿಸಿಕೊಂಡು ಮನೆಗೆ ಮರಳಿದ್ದು, ದರೋಡೆಕೋರರು ಬಂದೂಕು ಮತ್ತು ಚಾಕು ತೋರಿಸಿ ಅಶ್ವಿನಿ ಅವರನ್ನು ಕೂಡ ಬೆದರಿಸಿದ್ದಾರೆ. ಅಶ್ವಿನಿ ಹಾಗೂ ಅವರ ತಾಯಿಯನ್ನು ಹಗ್ಗದಲ್ಲಿ ಕಟ್ಟಿ ಕೋಣೆಗೆ ಕರೆದೊಯ್ದು ಮನೆಯಲ್ಲಿರುವ ಹಣ, ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡಾಗ ಇಬ್ಬರಿಗೂ ಥಳಿಸಿದ್ದಾರೆ ಎಂದು ಅಶ್ವಿನಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ಪ್ರಾರಂಭಿಸಿದ್ದು ಸಿಸಿಟಿವಿ ದೃಶ್ಯಾವಳಿಗಳ ತಪಾಸಣೆಯಲ್ಲಿ ತೊಡಗಿದ್ದಾರೆ. ಕೆಲ ಸ್ಥಳೀಯ ನಿವಾಸಿಗಳ ಸಹಾಯದೊಂದಿಗೆ ದರೋಡೆ ನಡೆದಿರುವ ಶಂಕೆಯಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.