ಮುಂಬೈ:ಕಳ್ಳತನ ಮಾಡಲು ಜನರ ಗಮನ ಬೇರೆಡೆ ಸೆಳೆಯುವ ‘ಜೇಬುಗಳ್ಳ’ರಂತೆ ಪ್ರಧಾನಿ ನರೇಂದ್ರ ಮೋದಿವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿದರ್ಭದಲ್ಲಿ ಪಕ್ಷದ ಪರ ಪ್ರಚಾರ ಮಾಡಿದ ಅವರು, ಮೋದಿ ಕೆಲವೇ ಕೆಲವು ಕೈಗಾರಿಕೋದ್ಯಮಿಗಳ ಪರ ವಹಿಸುತ್ತಿದ್ದಾರೆ. ಅವರ ವರ್ತನೆ ‘ಕಿಸೆಗಳ್ಳ’ರಂತೆ ಇದೆ ಎಂದು ಟೀಕಿಸಿದರು. ಕಾರ್ಪೊರೇಟ್ ತೆರಿಗೆ ಮನ್ನಾ ಮಾಡಿದ್ದಕ್ಕೆ ಮೋದಿ ಸರ್ಕಾರವನ್ನು ರಾಹುಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಯವತ್ಮಾಳ್ ಜಿಲ್ಲೆಯಲ್ಲಿ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್, ‘ಪ್ರಧಾನಿಯವರು ಚಂದ್ರಯಾನ ಯೋಜನೆ, ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಮಾತನಾಡುತ್ತಾರೆ. ಆದರೆ ಉದ್ಯೋಗ ಕೊರತೆ, ರೈತರ ಸಮಸ್ಯೆಗಳ ಬಗ್ಗೆ ಮೌನವಹಿಸುತ್ತಾರೆ’ ಎಂದಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಹಾಗೂ ನೋಟು ರದ್ದತಿಯು ಸಣ್ಣ, ಮಧ್ಯಮ ಉದ್ದಿಮೆದಾರರ, ರೈತರ, ಕಾರ್ಮಿಕರ ಮತ್ತು ಬಡ ಜನರ ಬೆನ್ನೆಲುಬನ್ನೇ ಮುರಿಯುವಂತೆ ಮಾಡಿತು. ಎಲ್ಲಿವರೆಗೆ ಮೋದಿ ಸರ್ಕಾರ ಇರುತ್ತೋ ಅಲ್ಲಿವರೆಗೂ ಉದ್ಯೋಗ ಕೊರತೆ ಸಮಸ್ಯೆ ಇರಲಿದೆ. ನಿರುದ್ಯೋಗ ಸಮಸ್ಯೆ ಇನ್ನು 6 ತಿಂಗಳಲ್ಲಿ ಹೆಚ್ಚಾಗಲಿದೆ ಎಂದು ರಾಹುಲ್ ಹೇಳಿದ್ದಾರೆ.
ದೇಶದ ಆಸ್ತಿಗಳಾದ ಬಂದರುಗಳು, ಕಲ್ಲಿದ್ದಲು ಗಣಿಗಳು ಮತ್ತು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದಂತಹ ಸಂಸ್ಥೆಗಳನ್ನೆಲ್ಲ ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.