ADVERTISEMENT

ಚೀನಾ, ಚೀನಾ ಕಂಪನಿಗಳ ಜತೆಗಿನ ಒಪ್ಪಂದ ವಜಾಗೊಳಿಸಲು ಕೋರಿ ಸುಪ್ರೀಂಗೆ ಅರ್ಜಿ

ಏಜೆನ್ಸೀಸ್
Published 1 ಜುಲೈ 2020, 9:25 IST
Last Updated 1 ಜುಲೈ 2020, 9:25 IST
   

ನವದೆಹಲಿ: ಚೀನಾ ಸರ್ಕಾರ ಮತ್ತು ಅಲ್ಲಿನ ಕಂಪನಿಗಳ ಜತೆ ಮಾಡಿಕೊಂಡಿರುವ ಎಲ್ಲ ಒಪ್ಪಂದಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ ಈ ಅರ್ಜಿ ಸಲ್ಲಿಸಲಾಗಿದೆ.

ಚೀನಾ ಸರ್ಕಾರದ ಜತೆಗಿನ ಭಾರತದ ವಹಿವಾಟು ನೀತಿಯನ್ನು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದೂ ಅರ್ಜಿದಾರರಾದ ಸುಪ್ರಿಯಾ ಪಂಡಿತ ಮನವಿ ಮಾಡಿದ್ದಾರೆ. ಇವರು ಜಮ್ಮುವಿನ ವಕೀಲೆಯಾಗಿದ್ದಾರೆ.

ಮುದ್ರಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಸಲುವಾಗಿ ಚೀನಾ ಕಂಪನಿ ಮತ್ತು ಅದಾನಿ ಗ್ರೂಪ್ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಬಗ್ಗೆಯೂ ಅರ್ಜಿದಾರರು ಉಲ್ಲೇಖಿಸಿದ್ದಾರೆ.

ADVERTISEMENT

ವ್ಯಾಪಾರ ಮತ್ತು ವ್ಯಹಾರಗಳಿಗಾಗಿ ಮಾಡಿಕೊಳ್ಳಲಾಗಿರುವ ಈ ಒಪ್ಪಂದಗಳು ಅನಿಯಂತ್ರಿತವಾಗಿದ್ದು, ದೇಶದ ಜನರ ಭಾವನೆಗಳಿಗೆ ವಿರುದ್ಧವಾಗಿವೆ. ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ್ ಭಾರತ್’ ನೀತಿಗೂ ವಿರುದ್ಧವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಕೆಲವು ಆಯ್ದ ಉದ್ಯಮಗಳಿಗೆ ಮಾತ್ರ ಚೀನಾ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲು ಅನುವು ಮಾಡಿಕೊಡುವುದು ತಾರತಮ್ಯದಿಂದ ಕೂಡಿದ ನಿಲುವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.