ನವದೆಹಲಿ: ವಿದೇಶಿ ಆಕ್ರಮಣಕಾರರಿಂದ ಹೆಸರಿಸಲ್ಪಟ್ಟಿರುವ ಪ್ರಾಚೀನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳ ಮೂಲ ಹೆಸರುಗಳನ್ನು ಪತ್ತೆ ಹಚ್ಚಲು ‘ಮರುನಾಮಕರಣ ಆಯೋಗ’ವನ್ನು ರಚಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಮೊಘಲ್ ಗಾರ್ಡನ್ ಅನ್ನು 'ಅಮೃತ್ ಉದ್ಯಾನ್' ಎಂದು ಮರುನಾಮಕರಣ ಮಾಡಿದ ಕೆಲವೇ ದಿನಗಳಲ್ಲಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ.
‘ಸಾರ್ವಭೌಮತ್ವವನ್ನು ಕಾಪಾಡಲು ಮತ್ತು ಸಂವಿಧಾನದ 21,25 ಮತ್ತು 29ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿರುವ ಘನತೆಯ ಹಕ್ಕು, ಧಾರ್ಮಿಕ ಹಕ್ಕು ಮತ್ತು ಸಂಸ್ಕೃತಿಯ ಹಕ್ಕನ್ನು ಪಡೆಯಲು ಹೆಸರು ಬದಲಾವಣೆ ಅವಶ್ಯಕವಾಗಿದೆ’ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ನೂರಾರು ನಗರಗಳ ಮತ್ತು ಸ್ಥಳಗಳ ಹೆಸರುಗಳನ್ನು ಉದಾಹರಿಸಿರುವ ಅರ್ಜಿದಾರರು, ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ನಾಗರಿಕರ ‘ತಿಳಿಯುವ ಹಕ್ಕ’ನ್ನು ರಕ್ಷಿಸುವ ಸಲುವಾಗಿ ಐತಿಹಾಸಿಕ ಸ್ಥಳಗಳ ಮೂಲ ಹೆಸರುಗಳನ್ನು ಸಂಶೋಧಿಸಲು ಮತ್ತು ಪ್ರಕಟಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
‘ಬಾಬರ್ ರಸ್ತೆ, ಹುಮಾಯೂನ್ ರಸ್ತೆ, ಅಕ್ಬರ್ ರಸ್ತೆ, ಜಹಾಂಗೀರ್ ರಸ್ತೆ, ತುಘಲಕ್ ರಸ್ತೆ, ಸಫ್ದರ್‌ಜಂಗ್ ರಸ್ತೆ ಮೊದಲಾದವುಗಳ ಮರುನಾಮಕರಣಕ್ಕೆ ಸರ್ಕಾರ ಏನೂ ಮಾಡಿಲ್ಲ’ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.