ADVERTISEMENT

ಕೋವಿಡ್‌ ಲಸಿಕೆಗಳಿಗೆ ಏಕರೂಪ ದರ ₹150 ನಿಗದಿ ಕೋರಿ ಪಿಐಎಲ್‌

ಪಿಟಿಐ
Published 28 ಏಪ್ರಿಲ್ 2021, 6:59 IST
Last Updated 28 ಏಪ್ರಿಲ್ 2021, 6:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಕೋವಿಡ್‌–19 ಲಸಿಕೆಯ ದರವನ್ನು ಪ್ರತಿ ಡೋಸ್‌ಗೆ ₹ 150 ರಂತೆ ಮಾರಾಟ ಮಾಡಲು ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಹಾಗೂ ಭಾರತ್‌ ಬಯೋಟೆಕ್‌ ಕಂಪನಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸಲ್ಲಿಸಲಾಗಿದೆ.

ಲಸಿಕೆಯನ್ನು ಉತ್ಪಾದಿಸುವ ಈ ಕಂಪನಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಾವು ಮಾರಾಟ ಮಾಡಲಿರುವ ಲಸಿಕೆಗೆ ಬೇರೆ ದರಗಳನ್ನು ನಿಗದಿ ಮಾಡಿರುವುದನ್ನು ಸಹ ಅರ್ಜಿದಾರರು ಪ್ರಶ್ನಿಸಿದ್ದಾರೆ.

ವಕೀಲ ಫಯಾಜ್‌ಖಾನ್‌ ಹಾಗೂ ಮೂವರು ಕಾನೂನು ವಿದ್ಯಾರ್ಥಿಗಳು ಈ ಪಿಐಎಲ್‌ ಸಲ್ಲಿಸಿದ್ದು, ‘ಲಸಿಕೆಯನ್ನು ಅಗತ್ಯ ವಸ್ತು ಎಂದೇ ಪರಿಗಣಿಸಬೇಕು. ಹೀಗಾಗಿ, ಉತ್ಪಾದನೆ ನಂತರ ಲಸಿಕೆಯ ಮಾರಾಟ, ವಿತರಣೆಯ ಜವಾಬ್ದಾರಿಯನ್ನು ಖಾಸಗಿ ಕಂಪನಿಗಳಿಗೆ ನೀಡುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

ಈ ಅರ್ಜಿಯ ತುರ್ತು ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ದೀಪಂಕರ್‌ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ನೇತೃತ್ವದ ವಿಭಾಗೀಯ ಪೀಠ ನಡೆಸುವ ಸಾಧ್ಯತೆ ಇದೆ.

‘ಕೋವಿಡ್‌–19ನಿಂದಾಗಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಔಷಧ ತಯಾರಕ ಕಂಪನಿಗಳು ಜನರ ಮನದಲ್ಲಿ ಭೀತಿಯನ್ನು ತುಂಬುತ್ತಿದ್ದಾರೆ’ ಎಂದೂ ಅರ್ಜಿಯಲ್ಲಿ ದೂರಿದ್ದಾರೆ.

‘ಇಡೀ ದೇಶವೇ ಕೋವಿಡ್‌–19 ಪಿಡುಗಿನಿಂದ ತತ್ತರಿಸಿದೆ. ಇಂಥ ಸಂದರ್ಭದಲ್ಲಿ ಲಸಿಕೆಯ ದರವನ್ನು ಸರ್ಕಾರ ನಿಯಂತ್ರಿಸಬೇಕು. ಲಸಿಕೆ ಮಾರಾಟ ಹೆಸರಿನಲ್ಲಿ ಹಗಲು ದರೋಡೆಗೆ ಅವಕಾಶ ನೀಡಬಾರದು’ ಎಂದು ಅರ್ಜಿದಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.