ಪುಣೆ/ಕೋಲ್ಕತ್ತ: ಈ ಬಾರಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾದ ಭಾರತ ಸಂಜಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರು ಎಡಪಂಥೀಯ ಒಲವು ಇರುವವರು ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
‘ನೊಬೆಲ್ ಪ್ರಶಸ್ತಿ ಪಡೆದಿರುವುದಕ್ಕೆ ಅಭಿಜಿತ್ ಬ್ಯಾನರ್ಜಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ಚಿಂತನೆ ಎಡಪಂಥೀಯ ಒಲವು ಉಳ್ಳದ್ದು ಎಂಬುದು ನಿಮಗೆಲ್ಲಾ ಗೊತ್ತಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಗೋಯಲ್ ಹೇಳಿದ್ದಾರೆ.
ಅಭಿಜಿತ್ ಅವರು ಕಾಂಗ್ರೆಸ್‌ನ ನ್ಯಾಯ್ (ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಕಟಿಸಿದ್ದ ಬಡತನ ನಿರ್ಮೂಲನೆ ಯೋಜನೆ) ಅನ್ನು ಬೆಂಬಲಿಸಿದ್ದರು. ಆದರೆ, ಭಾರತದ ಜನರು ಅವರ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ ಎಂದು ಗೋಯಲ್ ಹೇಳಿದ್ದಾರೆ.
ಹಾಗಿದ್ದರೂ ಭಾರತೀಯರೊಬ್ಬರು ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಅಭಿಜಿತ್ ಅವರ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ, ‘ಈ ಪ್ರಶ್ನೆಯನ್ನು ವರದಿಗಾರರು ಅಭಿಜಿತ್ ಅವರಿಗೇ ಕೇಳಬೇಕು’ ಎಂದರು.
ಆದರೆ, ಪಶ್ಚಿಮ ಬಂಗಾಳದ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಗೋಯಲ್ ಹೇಳಿಕೆಯನ್ನು ಖಂಡಿಸಿವೆ.
‘ಪಶ್ಚಿಮ ಬಂಗಾಳ ಮಾತ್ರವಲ್ಲ, ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ಅಭಿಜಿತ್ ಬಗ್ಗೆ ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಗಳು ಆ ಪಕ್ಷದ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ. ಅಭಿಜಿತ್ ಬಗ್ಗೆ ಬಿಜೆಪಿಯವರು ಕಡಿಮೆ ಮಾತನಾಡಿದಷ್ಟು ಒಳ್ಳೆಯದು. ಹೆಚ್ಚು ಮಾತನಾಡಿದಷ್ಟು ಬಿಜೆಪಿಯ ನೀಚ ಮನಸ್ಥಿತಿ ಬಯಲಾಗುತ್ತದೆ’ ಎಂದು ಟಿಎಂಸಿಯ ಮುಖಂಡರೊಬ್ಬರು ಹೇಳಿದ್ದಾರೆ.
‘ಬಿಜೆಪಿ ಮತ್ತು ಪೀಯೂಷ್‌ರಂತಹ ಮುಖಂಡರು ಅಭಿಜಿತ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸಹಜ. ಯಾಕೆಂದರೆ, ಬಿಎಸ್‌ಎನ್‌ಎಲ್, ರೈಲ್ವೆ ಸೇರಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡಲು ಬಿಜೆಪಿ ಬಯಸುತ್ತಿದೆ. ಅಭಿಜಿತ್ ಅವರು ಇದರ ವಿರುದ್ಧ ಮಾತನಾಡುತ್ತಿದ್ದಾರೆ. ಹಾಗಾಗಿ, ಭಾರತಕ್ಕೆ ಹೆಮ್ಮೆ ತಂದವರ ಬಗ್ಗೆ ಬಿಜೆಪಿ ಮಾತನಾಡಬಾರದು ಎಂದು ಬಿಜೆಪಿ ನಾಯಕರಿಗೆ ನಾವು ಮನವಿ ಮಾಡಬಹುದು ಅಷ್ಟೇ’ ಎಂದು ಸಿಪಿಎಂ ಮುಖಂಡ ಸುಜನ್ ಚಕ್ರವರ್ತಿ ಹೇಳಿದ್ದಾರೆ.
ಅಭಿಜಿತ್ ಅವರು ಕಾಂಗ್ರೆಸ್ ಪಕ್ಷದ ನ್ಯಾಯ್ ಅನ್ನು ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾದ ಅವರ ಸಾಧನೆಯ ಹೊಳಪು ಮಸುಕಾಗುತ್ತದೆಯೇ ಎಂದು ಕಾಂಗ್ರೆಸ್ ಮುಖಂಡ ಪ್ರದೀಪ್ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನ ನ್ಯಾಯ್ ಯೋಜನೆಯ ಪರಿಕಲ್ಪನೆ ರೂಪಿಸುವಲ್ಲಿ ಅಭಿಜಿತ್ ಅವರು ನೆರವಾಗಿದ್ದರು.
**
ಅಭಿಜಿತ್ ಸಲಹೆಗಳನ್ನು ಭಾರತೀಯರು ತಿರಸ್ಕರಿಸಿದ್ದಾರೆ. ಹಾಗಾಗಿ, ಅವರು ಹೇಳಿದ್ದೆಲ್ಲವನ್ನೂ ಒಪ್ಪಿಕೊಳ್ಳುವ ಅಗತ್ಯವಿಲ್ಲ.
-ಪೀಯೂಷ್ ಗೋಯಲ್, ಕೇಂದ್ರ ಸಚಿವ
**
ಇದು ಬಿಜೆಪಿಯ ಸಂಕುಚಿತ ಮನೋಭಾವ ಬಿಂಬಿಸುತ್ತದೆ. ಅಭಿಜಿತ್ ಬಗ್ಗೆ ಬಿಜೆಪಿಯ ಮುಖಂಡರು ಕಡಿಮೆ ಮಾತನಾಡಿದಷ್ಟು ಒಳ್ಳೆಯದು.
-ಸುಜನ್ ಚಕ್ರವರ್ತಿ, ಸಿಪಿಎಂ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.