ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಅರ್ಥ ವ್ಯವಸ್ಥೆ ನಿರ್ವಹಣೆ ಕುರಿತು ಸಮರ್ಥನೆ ನೀಡುವ ಭರದಲ್ಲಿ ‘ಐನ್‌ಸ್ಟೀನ್‌ಗೆ ಗುರುತ್ವಾಕರ್ಷಣೆ ಕಂಡು ಹಿಡಿಯಲು...‘ ಎಂದು ಹೇಳಿದ ಕೇಂದ್ರ ಸಚಿವ ಪೀಯೂಷ್ ಗೋಯಲ್ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಆಟೊಮೊಬೈಲ್ ಕ್ಷೇತ್ರದಲ್ಲಿ ಮಾರಾಟ ಕುಸಿಯಲು ಹೊಸ ಪೀಳಿಗೆಯವರು ಓಲಾ, ಉಬರ್ ಬಳಸುತ್ತಿರುವುದೂ ಕಾರಣ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೇಳಿಕೆ ನೀಡಿದ್ದು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ದೇಶದ ಅರ್ಥ ವ್ಯವಸ್ಥೆ, ವ್ಯಾಪಾರ ವಹಿವಾಟಿನ ಕುರಿತು ಮಾತನಾಡಿದ ಪೀಯೂಷ್ ಗೋಯಲ್ ಅವರು, ಟಿವಿ ವಾಹಿನಿಗಳಲ್ಲಿ ಕಾಣುವ ಲೆಕ್ಕಾಚಾರಗಳನ್ನು ನೆಚ್ಚಿಕೊಳ್ಳದಂತೆ ಸಲಹೆ ನೀಡಿದರು.
‘5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನೀವು ನೋಡುತ್ತಿದ್ದರೆ ದೇಶವು ಶೇ 12ರಷ್ಟು ವೃದ್ಧಿ ದರ ಕಾಣಬೇಕು. ಈಗ ಆರ್ಥಿಕ ವೃದ್ಧಿ ದರವು ಶೇ 6ರಷ್ಟಾಗಿದೆ. ಆ ಲೆಕ್ಕಾಚಾರಗಳತ್ತ ಗಮನಿಸಬೇಡಿ. ಅಂಥ ಲೆಕ್ಕಾಚಾರಗಳು ಐನ್‌ಸ್ಟೀನ್‌ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯುವಲ್ಲಿ ಯಾವತ್ತಿಗೂ ಸಹಕಾರಿಯಾಗಲಿಲ್ಲ...ರೂಪಿಸಲಾಗಿರುವ ಸೂತ್ರಗಳು, ಹಿಂದಿನ ತಿಳಿವಳಿಕೆಯನ್ನಷ್ಟೇ ಹಿಡಿದು ಹೊರಟರೆ ಈ ಜಗತ್ತಿನಲ್ಲಿ ಯಾವುದೇ ಹೊಸ ಆವಿಷ್ಕಾರಗಳೂ ಆಗುವುದಿಲ್ಲ‘ ಎಂದರು.
ಆದರೆ, ಟ್ವೀಟಿಗರು ಗುರುತ್ವಾಕರ್ಷಣೆ ಕಂಡು ಹಿಡಿದಿದ್ದು ನ್ಯೂಟನ್. ಐನ್‌ಸ್ಟೀನ್ ಅಲ್ಲ ಎಂದು ಬೊಟ್ಟು ಮಾಡಿದ್ದಾರೆ. ಐನ್‌ಸ್ಟೀನ್, ಪೀಯೂಷ್ ಗೋಯಲ್ ಹಾಗೂ ನ್ಯೂಟನ್ ಮೂರೂ ಹೆಸರುಗಳು ಟ್ವಿಟರ್ ಟಾಪ್ ಟ್ರೆಂಡಿಂಗ್‌ನಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.