ನವದೆಹಲಿ:ಕಳೆದ ಐದು ವರ್ಷಗಳಲ್ಲಿ ಹಣದುಬ್ಬರ ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ನಮ್ಮ ಸರ್ಕಾರ ಯಶಶ್ವಿಯಾಗಿದೆ.ಆರ್ಥಿಕವಾಗಿ ಮುನ್ನಡೆಯುತ್ತಿರುವ ದೇಶಗಳ ಪೈಕಿ ಭಾರತ 6ನೇ ಸ್ಥಾನದಲ್ಲಿದೆ. ಭಾರತ ಪ್ರಕಾಶಿಸುತ್ತಿದೆ ಎಂದು ಹಂಗಾಮಿ ಹಣಕಾಸು ಸಚಿವ ಪೀಯೂಷ್ ಗೋಯಲ್ ತಿಳಿಸಿದರು.
ಮಧ್ಯಂತರ ಬಜೆಟ್ ಭಾಷಣ ಮಾಡಿದ ಅವರು, ‘ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳ ಮೂಲಕ ದೇಶದ ಆದಾಯ ಹೆಚ್ಚಾಗಿದೆ.ಅತಿ ಹೆಚ್ಚು ವಿದೇಶಿ ನೇರ ಹೂಡಿಕೆಯೂ (ಎಫ್‌ಡಿಐ) ಹರಿದು ಬಂದಿದೆ. ಆರ್ಥಿಕವಾಗಿ ಭಾರತ ಮುನ್ನಡೆಯುತ್ತಿದೆ’ ಎಂದು ಹೇಳಿದರು.
ಬ್ಯಾಂಕ್‌ಗಳು ನೀಡಿರುವ ಸಾಲದ ಗುಣಮಟ್ಟ ಮತ್ತು ಸ್ಥಿತಿಗತಿ ಪರಿಶೀಲಿಸುವಂತೆ ಆರ್‌ಬಿಐಗೆ ಸೂಚನೆ ನೀಡಿದ್ದೇವೆ.ಜಿಎಸ್‌ಟಿ ಅನುಷ್ಠಾನ, ಬ್ಯಾಂಕಿಂಗ್ ಸುಧಾರಣೆಗೆ ದಿಟ್ಟ ಕ್ರಮ ದೇಶದ ಆರ್ಥಿಕ ಇತಿಹಾಸದ ಮೈಲಿಗಲ್ಲುಗಳಾಗಿವೆ ಎಂದು ಗೋಯಲ್ ತಿಳಿಸಿದರು.
ಆಯುಷ್ಮಾನ್ ಭಾರತದಿಂದ 50 ಕೋಟಿ ಜನರಿಗೆ ನೆರವು
ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ 50 ಕೋಟಿ ಜನರಿಗೆ ಸಹಾಯ ಮಾಡಲಾಗಿದೆ.ಯೋಜನೆ ಮೂಲಕ ಬಡವರ ₹3000 ಕೋಟಿ ಉಳಿತಾಯವಾಗಿದೆ.ಜನ ಔಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜನರಿಗೆ ಔಷಧಿ ಒದಗಿಸಲಾಗುತ್ತಿದೆ ಎಂದು ಗೋಯಲ್ ತಿಳಿಸಿದರು.
‘ಸ್ವಚ್ಛವಾಗುತ್ತಿದೆ ಭಾರತ’
ಶೇ 98 ಗ್ರಾಮಗಳಲ್ಲಿ ನೈರ್ಮಲ್ಯ ಸಾಧಿಸಲಾಗಿದೆ.5.45 ಲಕ್ಷ ಹಳ್ಳಿಗಳು ಬಹಿರ್ದೆಸೆ ಮುಕ್ತವಾಗಿವೆ ಎಂದ ಗೋಯಲ್, ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಕೈಜೋಡಿಸಿದ ಜನತೆಗೆ ಧನ್ಯವಾದ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.