ನವದೆಹಲಿ(ಪಿಟಿಐ): ರೈಲ್ವೆ ಇಲಾಖೆ ಅಥವಾ ರಾಜಧಾನಿ, ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳನ್ನಾಗಲಿ ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯ ಸುರೇಂದ್ರ ನಾಥ್ ನಗರ್ ಕೇಳಿದ್ದ ಪ್ರಶ್ನೆಗೆಗೋಯಲ್ ಲಿಖಿತ ಉತ್ತರ ನೀಡಿದ್ದಾರೆ. 100 ದಿನಗಳ ಯೋಜನೆಯಲ್ಲಿ 2 ರೈಲುಗಳನ್ನು ಐಆರ್‌ಸಿಟಿಸಿಗೆ ನೀಡುವುದಾಗಿ ಇಲಾಖೆ ಪ್ರಸ್ತಾವ ಇರಿಸಿತ್ತು. ನೂರು ದಿನ
ದೊಳಗಾಗಿ ಪ್ರಸ್ತಾವವನ್ನು ಆಹ್ವಾನಿಸುವುದಾಗಿಯೂ ತಿಳಿಸಿತ್ತು. ಈ ಕುರಿತು ಪ್ರಶ್ನಿಸಿದ್ದ ಸುರೇಂದ್ರ ನಾಥ್, ‘ರೈಲುಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆಯೇ?, ಹೀಗಿದ್ದರೆ ಪ್ರಯಾಣ ದರವನ್ನು ಹೇಗೆ ನಿಯಂತ್ರಿಸುತ್ತೀರಿ’ ಎಂದು ಪ್ರಶ್ನಿಸಿದ್ದರು.
100 ದಿನಗಳ ಯೋಜನೆಯಲ್ಲಿ ತನ್ನ 7 ಉತ್ಪಾದನಾ ಘಟಕ ಹಾಗೂ ಕಾರ್ಯಾಗಾರಗಳನ್ನೂ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ ಕಂಪನಿಗೆ ವಹಿಸುವ ಪ್ರಸ್ತಾವವಿರಿಸಿತ್ತು. ಇದಕ್ಕೂ ರೈಲ್ವೆ ಕಾರ್ಮಿಕರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ವೈ–ಫೈ ಯೋಜನೆ ಕೈಬಿಟ್ಟ ರೈಲ್ವೆ: ರೈಲುಗಳಲ್ಲಿ ವೈಫೈ ಸೌಲಭ್ಯ ನೀಡುವ ಯೋಜನೆಯನ್ನು ರೈಲ್ವೆ ಇಲಾಖೆ ಕೈಬಿಟ್ಟಿದೆ.
‘ಪ್ರಾಯೋಗಿಕವಾಗಿ ಉಪಗ್ರಹ ಸಂವಹನ ತಂತ್ರಜ್ಞಾನದ ಮೂಲಕ ಹೌರಾ–ರಾಜಧಾನಿ ರೈಲಿನಲ್ಲಿ ವೈಫೈ ಸೇವೆ ನೀಡಲಾಗಿತ್ತು. ಆದರೆಈ ತಂತ್ರಜ್ಞಾನ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿದೆ. ಈಗಾಗಲೇ 1,606 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ನೀಡಲಾಗುತ್ತಿದ್ದು, ವರ್ಷಾಂತ್ಯದೊಳಗೆ 4,791 ರೈಲು ನಿಲ್ದಾಣಗಳಲ್ಲಿ ವೈಫೈ ಸಿಗಲಿದೆ. ಕೆಲವು ರೈಲುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ 7,020 ಬೋಗಿಗಳಲ್ಲಿ ಅಳವಡಿಸಲಾಗುವುದು’ ಎಂದರು.
ಬುಲೆಟ್ ಟ್ರೇನ್ ಯೋಜನೆಗೆ 24 ರೈಲು
ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲ್ವೆ ಯೋಜನೆಗೆ ಜಪಾನ್‌ನಿಂದ 24 ರೈಲುಗಳ ಖರೀದಿಗೆ ಯೋಜನೆ ರೂಪಿಸಲಾಗಿದೆ ಎಂದು ಶುಕ್ರವಾರ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೋಯಲ್,‘ಟೆಂಡರ್ ಪ್ರಕ್ರಿಯೆ ಮುಖಾಂತರ ರೈಲು ಖರೀದಿಸಲಾಗುವುದು. ರೈಲು ಖರೀದಿ ಸೇರಿದಂತೆ ಪೂರ್ಣ ಯೋಜನೆಗೆ ₹1,08,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇ 81 ಮೊತ್ತವನ್ನು ಜಪಾನ್ ಅಂತರರಾಷ್ಟ್ರೀಯ ಸಹಕಾರಿ ಸಂಸ್ಥೆಯಿಂದ(ಜೈಕಾ)ಸಾಲದ ರೂಪದಲ್ಲಿ ಹೊಂದಿಸಿಕೊಳ್ಳಲಾಗುವುದು. 2023ಕ್ಕೆ ಯೋಜನೆ ಪೂರ್ಣಗೊಳಿಸುವ ಗುರಿ ಇರಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ 24 ರೈಲುಗಳ ಪೈಕಿ 6 ರೈಲುಗಳನ್ನು ಭಾರತದಲ್ಲೇ ತಯಾರುಗೊಳಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.