ನವದೆಹಲಿ: ಹುಡುಗಿಯರ ಜತೆ ಕೆಟ್ಟದಾಗಿ ವರ್ತಿಸದಂತೆ ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯವನ್ನು ಶಾಲಾ ಮಟ್ಟದಲ್ಲಿ ಆರಂಭಿಸುವ ಬಗ್ಗೆ ಅರವಿಂದ ಕೇಜ್ರವಾಲ್ ಚಿಂತಿಸಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಹೇಳಿದ್ದಾರೆ.
ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಲಿಯುವ ಬಾಲಕರು ಬಾಲಕಿಯರೊಂದಿಗೆ ಕೆಟ್ಟದಾಗಿ ವರ್ತಿಸುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳಬೇಕುಎಂದ ಎಫ್ಐಸಿಸಿಐ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.
ನಾನು ಭೇಟಿಯಾದ ಹಲವಾರು ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ. ಗಂಡು ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಾರೆ. ವರ್ಷಗಳು ಕಳೆದಾಗ ನಮ್ಮ ಶಿಕ್ಷಣ ಮುಖ್ಯವಾದುದು ಅಲ್ಲ ಎಂದು ಹೆಣ್ಣು ಮಕ್ಕಳಿಗೆ ಕೀಳರಿಮೆ ಬರುತ್ತಿತ್ತು. ಆದರೆ ಈಗ ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಕಾರಿಬದಲಾವಣೆ ಆದ ನಂತರ ಹೆಣ್ಣು ಮಕ್ಕಳಿಗೆ ನಾವು ಸಹೋದರರಷ್ಟೇ ಸಮಾನರು ಎಂಬ ಭಾವನೆ ಬಂದಿದೆ. ತಮ್ಮ ಸಹೋದರರು ಕಲಿಯುವ ಖಾಸಗಿ ಶಾಲೆಗಳಲ್ಲಿ ಈಜುಕೊಳ ಇರುವಂತೆ ಸರ್ಕಾರಿ ಶಾಲೆಗಳಲ್ಲಿ ಇದೆ. ಇದು ಹೆಣ್ಣು ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ.
ಬಾಲಕರು ಕೆಟ್ಟದಾಗಿ ವರ್ತಿಸುವುದನ್ನು ನಾವು ಸಹಿಸಿಕೊಳ್ಳಬಾರದು. ಯಾವುದೇ ಹೆಣ್ಣು ಮಕ್ಕಳ ಜತೆ ಕೆಟ್ಟದಾಗಿ ವರ್ತಿಸದಂತೆ ಸಹೋದರಿಯರು ತಮ್ಮಸಹೋದರರಿಗೆ ಹೇಳಬೇಕು. ಹೆಣ್ಣು ಮಕ್ಕಳ ಜತೆ ಕೆಟ್ಟದಾಗಿ ವರ್ತಿಸಿದರೆ ಮನೆಯೊಳಗೆ ಸೇರಿಸಲ್ಲ ಎಂದು ಅಮ್ಮಂದಿರು ಹೇಳಬೇಕು. ಗಂಡು ಮಕ್ಕಳ ಜತೆ ನಮ್ಮ ಮಾತುಕತೆಗಳು ಈ ರೀತಿ ಇರಬೇಕು ಎಂದಿದ್ದಾರೆ ಕೇಜ್ರಿವಾಲ್.
ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುವ ಬಗ್ಗೆ ಆಮ್ ಆದ್ಮಿ ಪಕ್ಷ ಕಾರ್ಯವೆಸಗುತ್ತಿದೆ. ಎಜ್ಯುಕೇಷನ್ ವರ್ಲ್ಡ್ ವೆಬ್‌ಸೈಟ್ ಪ್ರಕಾರ ಸರ್ಕಾರಿ ಶಾಲೆಗಳ ಗುಣಮಟ್ಟದ ಪಟ್ಟಿಯಲ್ಲಿ ದೆಹಲಿಯ ಶಾಲೆ ಅಗ್ರ ಸ್ಥಾನದಲ್ಲಿದೆ. ದ್ವಾರಕಾದಲ್ಲಿರುವ ರಾಜಕೀಯ ಪ್ರತಿಭಾ ವಿಕಾಸ್ ವಿದ್ಯಾಲಯವು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು.
ಮಹಿಳೆಯರಿಗೆ ಸುರಕ್ಷೆ ಒದಗಿಸುವ ಸಲುವಾಗಿ ದೆಹಲಿ ನಗರದಾದ್ಯಂತ ಸಿಸಿಟಿವಿ ಸ್ಥಾಪಿಸಲಾಗಿದೆ. ಏಕಕಾಲಕ್ಕೆ 3 ಲಕ್ಷ ಸಿಸಿಟಿವಿ ಅಳವಡಿಸಿದ ಮೊದಲ ನಗರ ಎಂಬ ಹೆಗ್ಗಳಿಕೆ ದೆಹಲಿಯದ್ದು. ನಗರದ ಎಲ್ಲ ಮೂಲೆಗಳಲ್ಲಿ ಸಿಸಿಟಿವಿ ಅಳವಡಿಸಿದ್ದು, ಅಗತ್ಯ ಬಂದರೆ ಮತ್ತಷ್ಟು ಸಿಸಿಟಿವಿಗಳನ್ನು ಅಳವಡಿಸಲಾಗುವುದು ಎಂದು ದೆಹಲಿ ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.