ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ನಿರಾಕರಿಸಿದ ತೀರ್ಪಿನ ಮರುಪರಿಶೀಲನೆಗೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರದ ಕಲಾಪದ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಅರ್ಜಿದಾರರ ಪರವಾಗಿ ಮಾಡಿದ ಮನವಿಯನ್ನು ಪರಿಗಣಿಸಿ, ಪುನರ್ ಪರಿಶೀಲನಾ ಅರ್ಜಿಯಲ್ಲಿನ ಅಂಶಗಳನ್ನು ನ್ಯಾಯಾಲಯದಲ್ಲಿಯೇ ಆಲಿಸಬೇಕು ಎಂದು ಹೇಳಿದೆ.
‘ಪುನರ್ ಪರಿಶೀಲನಾ ಅರ್ಜಿಯನ್ನು ನಾನು ಪರಿಶೀಲಿಸಿಲ್ಲ. ಅರ್ಜಿಯನ್ನು ನಾನು ಸಂವಿಧಾನ ಪೀಠದ ನ್ಯಾಯಮೂರ್ತಿಗಳ ಜೊತೆ ಹಂಚಿಕೊಳ್ಳುವೆ’ ಎಂದು ಸಿಜೆಐ ಹೇಳಿದರು.
‘ತಾರತಮ್ಯ ಆಗಿದೆ ಎಂಬುದನ್ನು ಎಲ್ಲ ನ್ಯಾಯಮೂರ್ತಿಗಳು (ಸಂವಿಧಾನ ಪೀಠದಲ್ಲಿ ಇದ್ದವರು) ಒಪ್ಪಿದ್ದಾರೆ. ತಾರತಮ್ಯ ಆಗಿದೆ ಎಂದಾದರೆ ಅದಕ್ಕೆ ಪರಿಹಾರವೂ ಇರಬೇಕು. ಬಹಳ ದೊಡ್ಡ ಸಂಖ್ಯೆಯ ಜನರ ಜೀವನ ಇದರ ಮೇಲೆ ನಿಂತಿದೆ. ಅರ್ಜಿಯನ್ನು ನ್ಯಾಯಾಲಯದಲ್ಲಿ ಆಲಿಸಬೇಕು ಎಂದು ಮನವಿ ಮಾಡಿದ್ದೇವೆ’ ಎಂದು ರೋಹಟಗಿ ತಿಳಿಸಿದರು.
ಸುಪ್ರೀಂ ಕೋರ್ಟ್‌ನ ವಿಧಿವಿಧಾನಗಳ ಪ್ರಕಾರ, ತೀರ್ಪಿನ ಪುನರ್ ಪರಿಶೀಲನಾ ಅರ್ಜಿಯನ್ನು ಸಂಬಂಧಪಟ್ಟ ನ್ಯಾಯಮೂರ್ತಿಗಳು ತಮ್ಮ ಕೊಠಡಿಯಲ್ಲಿಯೇ ಪರಿಶೀಲಿಸುತ್ತಾರೆ. ಆಗ ವಕೀಲರಿಗೆ ಮೌಖಿಕವಾಗಿ ವಾದ ಮಂಡಿಸಲು ಅವಕಾಶ ಇರುವುದಿಲ್ಲ.
ಆದರೆ, ಅತ್ಯಂತ ವಿಶೇಷವಾದ ಪ್ರಕರಣಗಳಿಗೆ ಸಂಬಂಧಿಸಿದ ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಲಯದಲ್ಲಿಯೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ ತೀರ್ಪು, ಸಲಿಂಗ ವಿವಾಹ ಬಯಸುವವರು ತಾರತಮ್ಯ ಎದುರಿಸುತ್ತಿದ್ದಾರೆ ಎಂಬುದನ್ನು ಒಪ್ಪಿಕೊಂಡರೂ, ‘ನಿಮಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿ, ವಾಪಸ್ ಕಳುಹಿಸಿದಂತೆ ಇದೆ’ ಎಂದು ಪುನರ್ ಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.