ADVERTISEMENT

ಮತ ಎಣಿಕೆ ದಿನ ಷೇರುಪೇಟೆ ಕುಸಿತ; ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2024, 3:41 IST
Last Updated 8 ಜೂನ್ 2024, 3:41 IST
   

ನವದೆಹಲಿ: ಲೋಕಸಭಾ ಚುನಾವಣೆ ಮತ ಎಣಿಕೆ ನಡೆದ ಜೂನ್‌ 4ರಂದು ಷೇರುಪೇಟೆಯಲ್ಲಿ ಉಂಟಾದ ಭಾರಿ ಕುಸಿತದ ಕುರಿತು ವಿಸ್ತೃತ ವರದಿ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಷೇರು ನಿಯಂತ್ರಣ ಮಂಡಳಿಗೆ (ಎಸ್‌ಇಬಿಐ-ಸೆಬಿ) ಸೂಚನೆ ನೀಡಬೇಕು ಎಂದು ಕೋರಿ ಸುಪ್ರೀಂ ಕೊರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ವಕೀಲ ವಿಶಾಲ್‌ ತಿವಾರಿ ಎಂಬವರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.

ಇದೇ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೂ ತನಿಖೆಗೆ ಒತ್ತಾಯಿಸಿದ್ದರು.

ADVERTISEMENT

ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಅವರು, ಷೇರು ಮಾರುಕಟ್ಟೆಯ ದಿಢೀರ್ ಕುಸಿತದಿಂದ ಸುಮಾರು 5 ಕೋಟಿ ಹೂಡಿಕೆದಾರರು ₹30 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿದ್ದಾರೆ. ಈ ವಿಚಾರವಾಗಿ ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

'ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವರು ಜೂನ್ 4ರಂದು ಷೇರುಪೇಟೆ ಏರಲಿದೆ ಎಂದಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಫಲಿತಾಂಶದ ದಿನ ಷೇರುಪೇಟೆ ಜಿಗಿತದ ಟಿ.ವಿ. ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಆದರೆ, ಅವರು ಉಲ್ಲೇಖಿಸಿದ್ದ ದಿನ ಷೇರು ಮಾರುಕಟ್ಟೆ ನಾಲ್ಕು ವರ್ಷಗಳ ಹಿಂದಿನ ಅಂಕಿಅಂಶಕ್ಕೆ ಕುಸಿದಿತ್ತು' ಎಂದು ಗುಡುಗಿದ್ದರು.

'ಲೋಕಸಭಾ ಚುನಾವಣೆಗೆ ನಡೆದ ಕೊನೇ ಹಂತದ ಮತದಾನ ಜೂನ್‌ 1ರಂದು ಮುಕ್ತಾಯವಾದ ಬಳಿಕ ಪ್ರಸಾರವಾದ ಚುನಾವಣೋತ್ತರ ಸಮೀಕ್ಷೆಗಳನ್ನು ಆಧರಿಸಿ, ಷೇರುಪೇಟೆ ಏರಿಳಿತ ಕಂಡಿದೆ. ಮತ ಎಣಿಕೆಯ ಮುನ್ನಾದಿನ ಎನ್‌ಎಸ್ಇ ನಿಫ್ಟಿ 50 ಹಾಗೂ ಎಸ್‌ಅಂಡ್‌ಪಿ ಬಿಎಸ್‌ಇ ಸೆನ್ಸೆಕ್ಸ್‌ ಕ್ರಮವಾಗಿ ಶೇ 3.3ರಷ್ಟು ಹಾಗೂ ಶೇ 3.4ರಷ್ಟು ಏರಿದ್ದವು. ಆದರೆ, ಫಲಿತಾಂಶದ ದಿನ ಭಾರಿ ಕುಸಿತ ಅನುಭವಿಸಿತ್ತು. ಇದರ ಹಿಂದೆ ಯಾವ ವಿದೇಶಿ ಹೂಡಿಕೆದಾರರ ವಹಿವಾಟು ಇದೆ ಎಂಬುದು ಬಹಿರಂಗವಾಗಬೇಕು. ಅದಕ್ಕಾಗಿ ತನಿಖೆ ನಡೆಸುವುದು ಅನಿವಾರ್ಯ' ಎಂದು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.